ಲೋಕಸಭಾ ಚುನಾವಣೆ: ಬಿಜೆಪಿ 400 ಸ್ಥಾನ ಗಳಿಸಲ್ಲ, ‘ಅಲುಗಾಡುತ್ತಿರುವ ವಿಕೆಟ್’ ಎಂದ ಪ್ರಿಯಾಂಕ್ ಖರ್ಗೆ

ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನ ಪಡೆಯಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕೇಂದ್ರಿಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನಮ್ಮನ್ನು ಹೆದರಿಸುತ್ತಿದ್ದಾರೆ. 1823 ಕೋಟಿ ರೂ. ಪಾವತಿ ಸಂಬಂಧ ಹೊಸದಾಗಿ ನೋಟಿಸ್ ನೀಡಿದ್ದಾರೆ. ವಿಪಕ್ಷಗಳನ್ನು ಎಷ್ಟೇ ಹೆದರಿಸಿದರೂ ಈ ಬಾರಿ ಬಿಜೆಪಿ 400 ಸ್ಥಾನಗಳಲ್ಲಿ ಗೆಲುವು ಸಾಧ್ಯವಿಲ್ಲ, ಅವರು ಅಲುಗಾಡುತ್ತಿರುವ ವಿಕೆಟ್ ಎಂದರು.

ಇದಕ್ಕೂ ಮುನ್ನಾ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟದ ಪಕ್ಷಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ನಮ್ಮ ಪಕ್ಷಗಳ ಖಾತೆ ಜಪ್ತಿ ಮಾಡುವ ಮೂಲಕ ತೆರಿಗೆ ಭಯೋತ್ಪಾದನೆ ಮಾಡುತ್ತಿದೆ ಎಂದು ಆರೋಪಿಸಿದರು.

ಐಟಿ, ಇಡಿ, ಸಿಬಿಐ ಬಿಜೆಪಿಯ ಹೊಸ ಘಟಕಗಳು. ಈ ಹೊಸ ಘಟಕಗಳಿಂದ ವಿಪಕ್ಷದವರಿಗೆ ಪ್ರೇಮ ಪತ್ರಗಳು ಬರುತ್ತಿವೆ. ಯಾವ ಆಧಾರದ ಮೇಲೆ ಇಲಾಖೆ ನೋಟಿಸ್ ನೀಡಿದೆ ಎಂಬುದು ಗೊತ್ತಿಲ್ಲ. ಪಕ್ಷದ ಇತಿಹಾಸದಲ್ಲಿ ಎಂದೂ ಕೂಡಾ ಈ ರೀತಿ ಆಗಿರಲಿಲ್ಲ. ಐಟಿ ಇಲಾಖೆ ರೂ. 14 ಲಕ್ಷ ದೇಣಿಗೆಯ ಅಸೆಸ್ ಮೆಂಟ್ ಸಿಗುತ್ತಿಲ್ಲ ಎಂದು ರೂ. 1,823.08 ಕೋಟಿ ತೆರಿಗೆ ಪಾವತಿ ಅಂತ ನೋಟಿಸ್ ನೀಡಿದೆ. 14 ಲಕ್ಷ ರೂ. ಬಗ್ಗೆ ದಾಖಲೆ ನೀಡಿದ್ದೇವೆ, ಆದರೂ ಕೂಡ ದಂಡ ಕಟ್ಟಲು ಹೇಳಿದ್ದಾರೆ. ಇದೇ ಅವಧಿಯಲ್ಲಿ ಬಿಜೆಪಿ ಖಾತೆಗೆ ಹೆಸರು, ವಿಳಾಸ ಇಲ್ಲದವರಿಂದ ದೇಣಿಗೆ ಬಂದಿದೆ. ಆದರೆ, ಆ ಪಕ್ಷಕ್ಕೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಪ್ರಫುಲ್ ಪಟೇಲ್ ಬಿಜೆಪಿಗೆ ಸೇರಿ ಇನ್ನು ಹತ್ತು ತಿಂಗಳಾಗಿಲ್ಲ, ಆಗಲೇ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ಇದನ್ನು ಯಾಕೆ ಚುನಾವಣೆ ಆಯೋಗ ನೋಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಈ ಮೂರು ಸಂಸ್ಥೆಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ. ಬಿಜೆಪಿಯ ಉಳಿದ ಎಲ್ಲಾ ಸೆಲ್​ಗಳು ನಿಷ್ಕ್ರಿಯಗೊಂಡಿವೆ. ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವಧಿಯಲ್ಲಿನ ಸಹಾರ ಡೈರಿ ಏನಾಯ್ತು? ಈಶ್ವರಪ್ಪ ಮನೆಯಲ್ಲಿ ನೋಟು ಎಣಿಸುವ ಮಷಿನ್ ಸಿಕ್ಕಿತ್ತಲ್ಲ ಅದೇನಾಯ್ತು, ಅವರ ವಿರುದ್ಧ ತನಿಖೆಗಳು ಏಕೆ ನಡೆಯಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

Latest Indian news

Popular Stories