ಮಲಿವಾಲ್ ಹಲ್ಲೆ ಪ್ರಕರಣ: ಎನ್‌ಸಿಡಬ್ಲ್ಯೂ ವಿಚಾರಣೆಗೆ ಬಿಭವ್ ಕುಮಾರ್ ಗೈರು; ಪೊಲೀಸರಿಂದ ಎಫ್ಐಆರ್ ದಾಖಲು

ನವದೆಹಲಿ: ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಶುಕ್ರವಾರ ರಾಷ್ಟ್ರೀಯ ಮಹಿಳಾ ಆಯೋಗದ(ಎನ್‌ಸಿಡಬ್ಲ್ಯೂ) ಮುಂದೆ ವಿಚಾರಣೆಗೆ ಗೈರಾಗಿದ್ದಾರೆ.

ಎನ್‌ಸಿಡಬ್ಲ್ಯು ಇಂದು ಬೆಳಗ್ಗೆ 11 ಗಂಟೆಗೆ ತಮ್ಮ ಮುಂದೆ ಹಾಜರಾಗುವಂತೆ ಬಿಭವ್ ಕುಮಾರ್‌ಗೆ ಸಮನ್ಸ್ ನೀಡಿತ್ತು.

ಆಯೋಗದ ತಂಡ, ಗುರುವಾರ ಬಿಭವ್ ಕುಮಾರ್ ಅವರ ನಿವಾಸಕ್ಕೆ ನೋಟಿಸ್ ನೀಡಲು ಹೋಗಿದ್ದರು. ಆದರೆ ಅವರು ಮನೆಯಲ್ಲಿ ಇರಲಿಲ್ಲ ಎಂದು ಎನ್‌ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಅವರು ಹೇಳಿದ್ದಾರೆ.

ಕುಮಾರ್ ಅವರ ಪತ್ನಿ ನೋಟಿಸ್ ಸ್ವೀಕರಿಸಲು ನಿರಾಕರಿಸಿದರು. ನನ್ನ ತಂಡ ಇಂದು ಮತ್ತೆ ಪೊಲೀಸರೊಂದಿಗೆ ಅವರ ನಿವಾಸಕ್ಕೆ ತೆರಳಿದೆ ಮತ್ತು ಅವರು ನಾಳೆಯೊಳಗೆ(ಎನ್‌ಸಿಡಬ್ಲ್ಯೂ ಮುಂದೆ) ವಿಚಾರಣೆಗೆ ಹಾಜರಾಗದಿದ್ದರೆ, ನಾನು (ಅವರ ನಿವಾಸಕ್ಕೆ) ಹೋಗುತ್ತೇನೆ” ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ತೆರಳಿದ ಮಲಿವಾಲ್ ಅವರು ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಕೇಜ್ರಿವಾಲ್ ಅವರ ಆಪ್ತ ಸಿಬ್ಬಂದಿಯೊಬ್ಬರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ದೆಹಲಿ ಸಿಎಂ ಆಪ್ತ ಸಹಾಯಕ ಬಿಭವ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಗುರುವಾರ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ವೈದ್ಯಕೀಯ ತಪಾಸಣೆಗಾಗಿ ಅವರನ್ನು ಏಮ್ಸ್‌ಗೆ ಕರೆದೊಯ್ದಿದ್ದಾರೆ.

ಬಿಭವ್ ಕುಮಾರ್ ನನ್ನು ಆರೋಪಿ ಎಂದು ಹೆಸರಿಸಲಾಗಿದ್ದು, ಪ್ರಕರಣದ ತನಿಖೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ಕೂಡ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Indian news

Popular Stories