ಮಂಗಳೂರು: ಪೆರ್ಮಂಕಿ ಉದ್ಯಮಿ ದರೋಡೆ ಪ್ರಕರಣ; 10 ಮಂದಿ ಆರೋಪಿಗಳ ಬಂಧನ

ಮಂಗಳೂರು: ಮಂಗಳೂರು ನಗರದ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಪೆರ್ಮಂಕಿಯ ಉದ್ಯಮಿ, ಪಿಡಬ್ಲ್ಯೂಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್‌ ಅವರ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸ್ಥಳೀಯರು, ಆರು ಮಂದಿ ಕೇರಳದವರು ಸೇರಿ 10 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸ್ಥಳೀಯರಾದ ನೀರುಮಾರ್ಗ ಒಂಟೆಮಾರ್‌ ಕಂಪಮನೆ ನಿವಾಸಿ ವಸಂತ ಯಾನೆ ವಸಂತ ಕುಮಾರ್‌ (42), ನೀರುಮಾರ್ಗ ಗ್ರಾಪಂ ಬಳಿಯ ನಿವಾಸಿ ರಮೇಶ ಪೂಜಾರಿ, ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಮುಕುಡಾಪು ಹೌಸ್‌ ನಿವಾಸಿ ರೇಮಂಡ್‌ ಡಿ’ಸೋಜಾ(47), ಕಾಸರಗೋಡು ಜಿಲ್ಲೆ ಉಪ್ಪಳ ಪೈವಳಿಕೆ ಕುರುಡುಪದವು ಕುರಿಯ ಹೌಸ್‌ನ ಬಾಲಕೃಷ್ಣ ಶೆಟ್ಟಿ ಯಾನೇ ಬಾಲಣ್ಣ (48) ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ಕೇರಳ ರಾಜ್ಯದ ತ್ರಿಶ್ಶೂರ್‌ ಜಿಲ್ಲೆ ಉರ್ಕನ್‌ಚ್ಚೇರಿ ಗ್ರಾಮದ ಜಾಕೀರ್‌ ಯಾನೆ ಶಾಕೀರ್‌ ಹುಸೈನ್‌(56), ತೋಮ್ಮನ್‌ ಕುಡುಪ್ಪಸೇರಿಯ ವಿನೋಜ್‌ ಪಿ.ಕೆ. ಯಾನೆ ವಿನ್ನುಣ ವಿನೋಜ್‌ ಪಲ್ಲಿಸ್ಸೆರಿ (38), ವಡಕ್ಕನ್‌ ಚೇರಿ ಮುಳ್ಳಕಲ್‌ ಹೌಸ್‌ ನಿವಾಸಿ ಸಜೀಶ್‌ .ಎಂ.ಎಂ. ಯಾನೆ ಮಣಿ(32), ವರಂಡ್ರಪಿಲ್ಲಿ ಅಂಚೆ ಕುನತುಲ್ಲಿ ಹೌಸ್‌ ನಿವಾಸಿ ಸತೀಶ್‌ ಬಾಬು (44), ಕೊಡಕ್ಕರ ಪೇರಂಬ್ರ ಅಂಚೆ ಕಾಚಪ್ಪಳ್ಳಿ ಹೌಸ್‌ ನಿವಾಸಿ ಶಿಜೋ ದೇವಸ್ಸಿ (38) ಹಾಗೂ ತಿರುವನಂತಪುರ ಜಿಲ್ಲೆ ಅಯಾನಿಮೂಡು ಪೋತನ್‌ ಕೋಡುವಿನ ಜಾನ್‌ ಬಾಸ್ಕೊ ಯಾನೇ ಬಿಜು.ಜಿ. (41), ಎಂಬುವವರನ್ನು ಬಂಧಿಸಲಾಗಿದೆ.ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿ, ಆರೋಪಿಗಳನ್ನು 14 ದಿನ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ. ಇನ್ನೂ ನಾಲ್ಕೈದು ಮಂದಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.

ಜೂ. 21ರಂದು ರಾತ್ರಿ 7-45ಕ್ಕೆ ಪದ್ಮನಾಭ ಕೋಟ್ಯಾನ್‌ ಅವರು ಮನೆಯಲ್ಲಿದ್ದ ವೇಳೆ 10-12 ಮಂದಿ ಆರೋಪಿಗಳು ಚೂರಿಯಿಂದ ಕೋಟ್ಯಾನ್‌ ಮೇಲೆ ಹಲ್ಲೆ ನಡೆಸಿ ನಂತರ ಅವರ ಪತ್ನಿ ಹಾಗೂ ಮಗನನ್ನು ಕಟ್ಟಿ 1.5 ಲಕ್ಷ ರೂ. ನಗದು, ಚಿನ್ನಾಭರಣ ಸೇರಿ ಒಟ್ಟು 9 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದರು.

ದರೋಡೆ ಪ್ರಕರಣವನ್ನು ಭೇದಿಸಲು ನಗರ ಅಪರಾಧಪತ್ತೆ ವಿಭಾಗ (ಸಿಸಿಬಿ), ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆ ಹಾಗೂ ದಕ್ಷಿಣ ಉಪವಿಭಾಗದ ಎಸಿಪಿಯವರ ನೇತೃತ್ವದಲ್ಲಿ ಸುಮಾರು 50 ಮಂದಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬಂದಿಯವರ ವಿಶೇಷ ತಂಡಗಳನ್ನು ನಿಯೋಜಿಸಲಾಗಿತ್ತು. ಘಟನೆ ನಡೆದ ಮನೆಯಲ್ಲಿ ದೊರೆತ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಹಾಗೂ ಮಂಗಳೂರು ಕಮೀಷನರೇಟ್‌ ವ್ಯಾಪ್ತಿಯಲ್ಲಿನ ವಿವಿಧ ಕಡೆಗಳ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ತನಿಖೆ ಕೈಗೊಳ್ಳಲಾಗಿತ್ತು.ಪ್ರಕರಣ ಭೇದಿಸಿದ ಪೊಲೀಸ್‌ ತಂಡಕ್ಕೆ ಸೂಕ್ತ ಬಹುಮಾನ ನೀಡುವುದಾಗಿ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.ಯಾವುದೇ ಸಾಕ್ಷ ಇರಲಿಲ್ಲ
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷÂ ಇರಲಿಲ್ಲ. “ಹ್ಯೂಮನ್‌ ಇಂಟಲಿ ಜೆನ್ಸ್‌’ ಆಧಾರದಲ್ಲಿ ತನಿಖೆ ನಡೆಸಲಾಗಿದೆ. ದರೋಡೆ ಪ್ರಕರಣಕ್ಕೆ ಸಂಬಂಧಿ ಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದಾಗ ದರೋಡೆ ಕೃತ್ಯದಲ್ಲಿ ಕೋಟ್ಯಾನ್‌ ಅವರನ್ನು ಹತ್ತಿರದಿಂದ ತಿಳಿದಿರುವ ಹಾಗೂ ಅವರ ಜತೆಯಲ್ಲಿ ಕೆಲಸ ಮಾಡುವ ಕೆಲಸಗಾರರ ಹಾಗೂ ಹೊರ ರಾಜ್ಯದ ವ್ಯಕ್ತಿಗಳ ಕೈವಾಡವಿರುವುದು ಕಂಡು ಬಂದಿತ್ತು.ಲಾರಿ ಚಾಲಕನೇ ದರೋಡೆಗೆ ಮೂಲ
ಕೋಟ್ಯಾನ್‌ ಅವರ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ವಸಂತ ಕುಮಾರ್‌ ಶಾಮೀಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ತಿಳಿದು ಬಂದಿತು. ಅದರಂತೆ ಆತನನ್ನು ವಿಚಾರಣೆ ನಡೆಸಿದಾಗ ಉದ್ಯಮಿಯ ವ್ಯವಹಾರದ ಹಾಗೂ ಮನೆಯ ಮಾಹಿತಿಯನ್ನು ಇನ್ನೋರ್ವ ಆರೋಪಿ ರಮೇಶ್‌ ಪೂಜಾರಿಗೆ ನೀಡಿದ್ದು, ಆತ ಮತ್ತು ರೇಮಂಡ್‌ ಡಿ’ಸೋಜಾ ಅವರು ಇನ್ನೋರ್ವ ಆರೋಪಿ ಬಾಲಕೃಷ್ಣ ಶೆಟ್ಟಿಗೆ ಮಾಹಿತಿ ವರ್ಗಾಯಿಸಿದ್ದಾರೆ. ಬಾಲಕೃಷ್ಣ ಶೆಟ್ಟಿ ತನ್ನ ಸ್ನೇಹಿತ ಕೇರಳದ ವ್ಯಕ್ತಿಯೊಂದಿಗೆ ದರೋಡೆ ನಡೆಸಲು ಸಂಚು ರೂಪಿಸಿ ಉದ್ಯಮಿಯ ಮನೆಯ ಮಾಹಿತಿ ನೀಡಿ ಆರೋಪಿಗಳನ್ನು ಮಂಗಳೂರಿಗೆ ಕರೆಸಿಕೊಂಡು ಈ ದರೋಡೆ ಕೃತ್ಯ ನಡೆಸಿದ್ದಾರೆ ಎಂದು ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ.ಕೇರಳಕ್ಕೆ ತೆರಳಿ ಆರೋಪಿಗಳ ವಶ
ಕೇರಳದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರ ಎರಡು ತಂಡಗಳು ಕೇರಳಕ್ಕೆ ತೆರಳಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ದರೋಡೆ ಕೃತ್ಯದಲ್ಲಿ ಒಟ್ಟು 15ಕ್ಕೂ ಹೆಚ್ಚು ಆರೋಪಿಗಳು ಭಾಗಿಯಾಗಿದ್ದು, ಬಿಜು ಹಾಗೂ ಸತೀಶ್‌ ಬಾಬು ಎರಡು ತಂಡಗಳನ್ನು ಮಂಗಳೂರಿಗೆ ಕಳುಹಿಸಿ ದರೋಡೆಗೆ ಸಂಚು ರೂಪಿಸಿದ್ದರು.ವಸಂತ್‌ ಗ್ರಾಪಂ ಸದಸ್ಯ!
ಬಂಧಿತ ಆರೋಪಿಗಳ ಪೈಕಿ ವಸಂತ ಕುಮಾರ್‌ ನೀರುಮಾರ್ಗ ಗ್ರಾಮ ಪಂಚಾಯತ್‌ ಸದಸ್ಯನಾಗಿದ್ದ. ಜತೆಗೆ ಪದ್ಮನಾಭ ಕೋಟ್ಯಾನ್‌ ಅವರ ಮನೆಯಲ್ಲಿ 4 ವರ್ಷಗಳಿಂದ ಲಾರಿ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದ. ಘಟನೆ ನಡೆದ ದಿನವೂ ವಿಟ್ಲಕ್ಕೆ ಲಾರಿ ತೆಗೆದುಕೊಂಡು ಹೋಗಿ ವಾಪಸು ಬಂದು ಮನೆಯಲ್ಲಿ ಇಟ್ಟಿದ್ದ. ಪೊಲೀಸರು ಸ್ಥಳ ಪರಿಶೀಲಿಸಿದಾಗಲೂ ಸ್ಥಳದಲ್ಲೇ ಇದ್ದು, ಏನೂ ಗೊತ್ತಿಲ್ಲದವನಂತೆ ನಾಟಕ ಮಾಡಿದ್ದ ಎನ್ನುತ್ತಾರೆ ಆಯುಕ್ತರು.

300 ಕೋ.ರೂ. ಇದೆ ಎಂದು ಬಂದಿದ್ದ ತಂಡ!
ಮನೆಯಲ್ಲಿ ಹಣವಿರುವ ಬಗ್ಗೆ ವಸಂತ ಕುಮಾರ್‌ ಹಾಗೂ ಇತರರು ಮನೆಯಲ್ಲಿ 100 ಕೋ.ರೂ. ಹಣ ಇದೆ ಎಂದು ಮಾತುಕತೆ ನಡೆಸಿದ್ದು, ಇದು ಬಾಲಕೃಷ್ಣ ಶೆಟ್ಟಿಯಿಂದ ಕೇರಳ ತಂಡಕ್ಕೆ ತಲುಪುವಾಗ 300 ಕೋ.ರೂ.ಗೆ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳ ತಂಡ ದರೋಡೆ ಮಾಡಿ ದುಡ್ಡು ಅಪಹರಿಸಲೆಂದೇ 15-20 ಗೋಣಿಗಳನ್ನು ತಂದಿದ್ದರು. ಜತೆಗೆ ಚಾಕು ಹಾಗೂ ಹಣ ತುಂಬಿಸಿರುವ ಕಪಾಟಿನ ಬಾಗಿಲು ತೆರೆಯಲು ಆಯುಧಗಳನ್ನೂ ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜೂ.18ರಂದು “ಟ್ರಯಲ್‌’!
ದರೋಡೆ ನಡೆಸಲು 7-8 ತಿಂಗಳ ಹಿಂದಿನಿಂದಲೇ ಯೋಜನೆ ರೂಪಿಸಲಾಗಿತ್ತು. ಅದರಂತೆ ಪಂಪ್‌ವೆಲ್‌ ಬಳಿ ಬಂದಿದ್ದ ಕೇರಳದ ತಂಡ ಸ್ಥಳೀಯ ತಂಡವನ್ನು ಭೇಟಿ ಮಾಡಿ ಚರ್ಚಿಸಿತ್ತು. ಮನೆಯ ಪ್ರದೇಶ, ಮನೆಯಲ್ಲಿ ಯಾರೆಲ್ಲ ಇರುತ್ತಾರೆ, ಸ್ಥಳದ ಮ್ಯಾಪ್‌ ಎಲ್ಲವನ್ನೂ ಪರಿಶೀಲಿಸಿತ್ತು. ಜೂ.18ರಂದು ಒಂದು ಬಾರಿ ಟ್ರಯಲ್‌ ರೀತಿಯಲ್ಲಿ ದರೋಡೆಯ ಪ್ರಯತ್ನ ನಡೆಸಿದ್ದರು. ಆದರೆ ಅಂದು ವಿಫ‌ಲವಾಯಿತು. ದರೋಡೆ ವೇಳೆ ಜಾಕೀರ್‌ ಹುಸೇನ್‌ “ಹಿಂದಿ’ಯಲ್ಲಿ ಮಾತನಾಡಿ ದಾರಿತಪ್ಪಿಸಲು ಯತ್ನಿಸಿದ್ದ ಎಂದು ಆಯುಕ್ತರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಸಿದ್ಧಾರ್ಥ್ ಗೋಯೆಲ್‌, ಬಿ.ಪಿ.ದಿನೇಶ್‌ ಕುಮಾರ್‌, ಎಸಿಪಿ ಧನ್ಯಾ ನಾಯಕ್‌ ಉಪಸ್ಥಿತರಿದ್ದರು.

Latest Indian news

Popular Stories