ಮಂಗಳೂರು: ಹಳೆಮನೆ ಕೆಡವುವಾಗ ಗೋಡೆ ಮೈಮೇಲೆ ಬಿದ್ದು ಇಬ್ಬರು ಮೃತ್ಯು

ಮಂಗಳೂರು: ಹಳೆಯ ಮನೆಯನ್ನು ಕೆಡವುತ್ತಿದ್ದ ವೇಳೆ ಗೋಡೆ ಮೈಮೇಲೆ ಬಿದ್ದು ಇಬ್ಬರು ಮೃತಪಟ್ಟ ಘಟನೆ ಮಂಗಳೂರಿನ ಜೈಲು ರಸ್ತೆಯ ಸಿ.ಜೆ.ಕಾಮತ್ ರಸ್ತೆಯಲ್ಲಿ ನಡೆದಿದೆ.

ಜೇಮ್ಸ್ ಹಾಗೂ ಅಡ್ವಿನ್ ಮೃತಪಟ್ಟವರಾಗಿದ್ದು, ಇವರು ಸೋದರ ಸಂಬಂಧಿಗಳೆಂದು ತಿಳಿದು ಬಂದಿದೆ.

ಜೇಮ್ಸ್ ಅವರು ಬಹರೈನ್‌ನಲ್ಲಿದ್ದು, ಅವರ ಕುಟುಂಬ ಬಲ್ಮಠದಲ್ಲಿ ಫ್ಲ್ಯಾಟ್‌ವೊಂದರಲ್ಲಿ ವಾಸವಿತ್ತು. ಜೈಲುರಸ್ತೆಯ ಸಿ.ಜೆ.ಕಾಮತ್ ರಸ್ತೆಯಲ್ಲಿರುವ ತಮ್ಮ ಹಳೆಮನೆಯನ್ನು ಕೆಡವಿ ಹೊಸಮನೆ ನಿರ್ಮಾಣದ ಉದ್ದೇಶ ಹೊಂದಿದ್ದರು‌. ಅದಕ್ಕಾಗಿಯೇ ಅವರು ಬಹರೈನ್‌ನಿಂದ ಆಗಮಿಸಿದ್ದರು.

ಅದರಂತೆ ಗುರುವಾರ ಬೆಳಗ್ಗೆ ಹಳೆಮನೆಯನ್ನು ಜೆಸಿಬಿಯಿಂದ ಕೆಡವಲಾಗುತ್ತಿತ್ತು. ಈ ವೇಳೆ ಜೇಮ್ಸ್ ಅವರು ಅಲ್ಲಿಯೇ ನಿಂತು ಜೆಸಿಬಿ ಕಾಮಗಾರಿಯನ್ನು ವೀಕ್ಷಿಸುತ್ತಿದ್ದರು. ಅಷ್ಟು ಹೊತ್ತಿಗೆ ಅಲ್ಲಿಯೇ ಪಕ್ಕದ ಮನೆಯಲ್ಲಿರುವ ಜೇಮ್ಸ್ ಸೋದರ ಸಂಬಂಧಿ ಅಡ್ವಿನ್ ಅವರೂ ಅಲ್ಲಿಗೆ ಆಗಮಿಸಿದ್ದು, ಇಬ್ಬರೂ ನಿಂತು ಮಾತನಾಡುತ್ತಿದ್ದರು. ಬೆಳಗ್ಗೆ 10.30ವೇಳೆಗೆ ಜೆಸಿಬಿ ಕಾಮಗಾರಿ ನಡೆಯುತ್ತಿದ್ದಂತೆ ಮನೆಯ ಗೋಡೆ ಲಿಂಟಲ್ ಸಹಿತ ಕುಸಿದು ಅಲ್ಲಿಯೇ ನಿಂತಿದ್ದ ಜೇಮ್ಸ್ ಹಾಗೂ ಅಡ್ವಿನ್ ಅವರ ಮೇಲೆಯೇ ಬಿದ್ದಿದೆ. ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ‌ ಎಂದು ತಿಳಿದು ಬಂದಿದೆ.

Latest Indian news

Popular Stories