ಮಂಗಳೂರು: ಬಟ್ಟೆಯಿಂದ ಕುತ್ತಿಗೆ ಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಮೃತದೇಹ ಪತ್ತೆಯಾದ ಘಟನೆ ನಗರದ ಹೊರವಲಯದ ಜೋಕಟ್ಟೆಯಲ್ಲಿ ನಡೆದಿದೆ.
ಮೃತ ಬಾಲಕಿಯು ಬೆಳಗಾವಿ ಮೂಲದವಳಾಗಿದ್ದು, ನಾಲ್ಕು ದಿನಗಳ ಹಿಂದೆ ಚಿಕಿತ್ಸೆಯ ಹಿನ್ನೆಲೆಯಲ್ಲಿ ಜೋಕಟ್ಟೆಯಲ್ಲಿನ ತನ್ನ ದೊಡ್ಡಪ್ಪ ಹನುಮಂತು ಮನೆಗೆ ಬಂದು ನೆಲೆಸಿದ್ದಳು.
ಹನುಮಂತು ಮತ್ತು ಕುಟುಂಬ ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ಮಂಗಳವಾರ ಮನೆಯಲ್ಲಿದ್ದ ಎಲ್ಲರೂ ಕೂಲಿ ಕೆಲಸಕ್ಕೆ ತೆರಳಿದ್ದು, ಬಾಲಕಿ ಮಾತ್ರ ಇದ್ದಳು. ಈ ವೇಳೆ ಊರಿನಿಂದ ಬಾಲಕಿಯ ತಾಯಿ ನೆರೆ ಮನೆಗೆ ಕರೆ ಮಾಡಿ ಬಾಲಕಿಗೆ ಫೋನ್ ಕೊಡುವಂತೆ ಹೇಳಿದ್ದಳು. ಬಾಲಕಿಗೆ ಫೋನ್ ಕೊಡಲು ನೆರೆಮನೆಯವರು ತೆರಳಿದ ವೇಳೆ ಬಟ್ಟೆಯಿಂದ ಕತ್ತು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಉಪಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.