ಚಡ್ಡಿ ಗ್ಯಾಂಗನ್ನು ಮಂಗಳೂರು ಪೊಲೀಸರು ಸೆರೆ ಹಿಡಿದದ್ದೇ ರಣ ರೋಚಕ | ಮುಲ್ಕಿ ಯಲ್ಲಿ ಕಾರು ನಿಲ್ಲಿಸಿ ಪೊಲೀಸರ ದಿಕ್ಕು ತಪ್ಪಿಸಲು ಹೊರಟವರು ಸಿಕ್ಕಿ ಬಿದ್ದದ್ದು ಎಲ್ಲಿ ಗೊತ್ತಾ ?

ಮಂಗಳೂರು: ನಗರದ ಕೋಟೆಕಣಿಯಲ್ಲಿ ನಡೆದ ಮನೆ ದರೋಡೆ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಐದೇ ಗಂಟೆಗಳಲ್ಲಿ ಭೇದಿಸಿದ್ದು, ಸಾರ್ವಜನಿಕರ ಶಹಬ್ಬಾಸ್ ಗಿರಿಗೆ ಪಾತ್ರರಾಗಿದ್ದಾರೆ.
ಮಧ್ಯಪ್ರದೇಶ ಮೂಲದವರಾದ ರಾಜು ಸಿಂಗ್ವಾನಿಯಾ, ಮಯೂರ್ ಮತ್ತು ಬಾಲಿ‌ ಎಂಬವರನ್ನು ನಗರ ಪೊಲೀಸರು ಘಟನೆ ನಡೆದ ಕೆಲವೇ ತಾಸುಗಳಲ್ಲಿ ವಶಕ್ಕೆ ಪಡೆದದ್ದು ಮಾತ್ರ ಕುತೂಹಲ ಭರಿತ ಸ್ಟೋರಿ.
ಮಧ್ಯಪ್ರದೇಶ ಮೂಲದ ಈ ತಂಡ ಮಂಗಳೂರು ಮತ್ತು ಉಡುಪಿ ಕಡೆಗಳಲ್ಲಿ ಹಲವು ದರೋಡೆ, ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿತ್ತೆಂದು ಹೇಳಲಾಗುತ್ತಿದ್ದೂ, ಚಡ್ಡಿ ಗ್ಯಾಂಗ್ ಎಂಬ ಹೆಸರಿನಲ್ಲಿ ಕುಖ್ಯಾತಿ ಪಡೆದಿತ್ತು.
ಈ ಗ್ಯಾಂಗ್ ಕೆಲ‌ ದಿನಗಳಿಂದ ಮಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಕೋಟೆಕಣಿಯ ವಿಕ್ಟರ್ ಮೆಂಡೋನ್ಸಾ ಮನೆಗೆ ಕನ್ನ ಹಾಕುವ ಪ್ಲ್ಯಾನ್ ರೂಪಿಸಿದ್ದರು. ತಮ್ಮ ಯೋಜನೆಯಂತೆ ಜುಲೈ 9ರಂದು ಬೆಳಗ್ಗಿನ ಜಾವ ಮನೆಗೆ ಕನ್ನ ಹಾಕಿದ್ದ ಚೆಡ್ಡಿ ಗ್ಯಾಂಗ್ ಗ್ಯಾಸ್ ಕಟ್ಟರ್‌ನಿಂದ ಕಿಟಕಿ ತುಂಡರಿಸಿ ಮನೆ ಒಳಗೆ ನುಗ್ಗಿದೆ.
ಅಲ್ಲಿದ್ದ ವೃದ್ಧ ದಂಪತಿ ವಿಕ್ಟರ್ ಮೆಂಡೋನ್ಸಾ‌ ಮತ್ತು ಪತ್ನಿ ಪ್ಯಾಟ್ರಿಷಾ ಮೆಂಡೋನ್ಸಾ ಅವರಿಗೆ ಹಲ್ಲೆ ನಡೆಸಿ ಮನೆಯಲ್ಲಿದ್ದ ಸುಮಾರು 12 ಲಕ್ಷದಷ್ಟು ಬೆಲೆ ಬಾಳುವ ನಗ-ನಗದನ್ನು ದೋಚಿದ್ದಾರೆ.

ಪೊಲೀಸರ ದಿಕ್ಕು ತಪ್ಪಿಸಲು ಯತ್ನ: ಮನೆ ದರೋಡೆ ಮಾಡಿದ ಚಡ್ಡಿ ಗ್ಯಾಂಗ್ ಅದೇ ಮನೆಯ ಕಾರಿನಲ್ಲಿ ಮುಲ್ಕಿ ತನಕ ಸಂಚರಿಸಿದೆ. ಅಲ್ಲಿಂದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ತಿರುಗಿ ಮಂಗಳೂರಿಗೆ ಬಂದ ತಂಡ ಅಲ್ಲಿಂದ ನೇರವಾಗಿ ಬೆಂಗಳೂರು ಬಸ್ ಹತ್ತಿದ್ದಾರೆ. ಕಾರಿನ ಜಾಡು ಹಿಡಿದು ಹೋದ ಪೊಲೀಸರು ಮುಲ್ಕಿಯಲ್ಲಿ ಕಾರು ಕಂಡು ಮುಂಬೈ ಹೋಗಿರಬಹುದೆಂದು ಶಂಕಿಸಲಿ ಎಂದು ಚೆಡ್ಡಿ ಗ್ಯಾಂಗ್ ಈ ರೀತಿ ಮಾಡಿದೆ ಎನ್ನಲಾಗುತ್ತದೆ. ಆದರೆ ಸಮೀಪದ ಮನೆಯ ಸಿಸಿಟಿವಿಯಲ್ಲಿ ಗ್ಯಾಂಗ್ ವಾಪಸ್ ಮಂಗಳೂರಿಗೆ ಬರುವ ಬಸ್ ಹತ್ತಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಈ ಜಾಡು ಹಿಡಿದು ತನಿಖೆ ನಡೆಸಿದ್ದರು.
ತಂಡ ಮಂಗಳೂರಿಗೆ ಬಂದು ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರು ಹೊರಟದ್ದನ್ನು ಸಿಬ್ಬಂದಿ ಮೂಲಕ ತಿಳಿದ ಪೊಲೀಸರು ಕೂಡಲೇ ಹಾಸನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿ ಅಲರ್ಟ್ ಆದ ಪೊಲೀಸರು ಬಸ್‌ನ ಮಾಹಿತಿ ಪಡೆದು ಸಕಲೇಶಪುರದಲ್ಲಿ ಬಸ್‌ನ್ನು ತಡೆದು ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.

ತಪ್ಪಿಸಲೆತ್ನಿಸಿದ ಆರೋಪಿಗಳಿಗೆ ಗುಂಡೇಟು: ಬುಧವಾರ ಆರೋಪಿಗಳನ್ನು ಸ್ಥಳ ಮಹಜರು ನಡೆಸಲು ಮಂಗಳೂರಿನಿಂದ ಆರೋಪಿಗಳನ್ನು ಮುಲ್ಕಿ ಕಡೆಗೆ ಪೊಲೀಸರು ಕರೆದೊಯ್ಯುತ್ತಿದ್ದರು. ಈ ವೇಳೆ ರಾಜು ಸಿಂಗ್ವಾನಿಯ(24) ಹಾಗೂ ಬಾಲಿ(22) ಎಂಬಿಬ್ಬರು ಆರೋಪಿಗಳು ಪೊಲೀಸರನ್ನು ತಳ್ಳಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಬಳಿಕ ಇಬ್ಬರ ಕಾಲಿಗೆ ಗುಂಡಿಕ್ಕಿದ್ದಾರೆ. ಸದ್ಯ ಗಾಯಾಳು ಆರೋಪಿಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಗಳು ತಳ್ಳಿರುವ ಪರಿಣಾಮ ಇಬ್ಬರು ಪೊಲೀಸರಿಗೂ ಗಾಯವಾಗಿದ್ದು, ಅವರನ್ನು ನಗರದ ಎ‌.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಡ್ಡಿ ಗ್ಯಾಂಗ್ ಹೆಸರು ಹೇಗೆ ಬಂತು: ಉಡುಪಿ ಮತ್ತು ಮಂಗಳೂರಿನ ಹಲವೆಡೆ ಕಳ್ಳತನ ಕೃತ್ಯ ನಡೆಸಿದ್ದ ಈ ತಂಡ, ಕಳ್ಳತನದ ವೇಳೆ ಚಡ್ಡಿ ಮತ್ತು ಬನಿಯನ್ ಧರಿಸುತ್ತಿದ್ದರು. ಕೃತ್ಯದ ಬಳಿಕ ಅದೇ ಚೆಡ್ಡಿ ಬನಿಯನ್ ಮೇಲೆ ಬೇರೆ ವಸ್ತ್ರ ಧರಿಸಿ ತಮ್ಮ ಗುರುತು ಪತ್ತೆಯಿಂದ ತಪ್ಪಿಸಿಕೊಳ್ಳುತ್ತಿದ್ದರು.

Latest Indian news

Popular Stories