ಮಣಿಪಾಲ: ಬಿಜೆಪಿ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಗೆ ಅವಮಾನ: ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ ದಾಖಲು

ಮಣಿಪಾಲ: ಮಣಿಪಾಲದ ಸಿಂಡಿಕೇಟ್ ಸರ್ಕಲ್ನಲ್ಲಿ ಸೆ.6ರಂದು ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಅವಮಾನಿಸಿದ ಆರೋಪದಡಿ ಬಿಜೆಪಿ ಮುಖಂಡರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರದ ಶಿಕ್ಷಕರೊಬ್ಬರಿಗೆ ನೀಡಲಾದ ಶಿಕ್ಷಕ ಪ್ರಶಸ್ತಿಯನ್ನು ತಡೆ ಹಿಡಿದಿರುವ ರಾಜ್ಯ ಸರಕಾರ ವಿರುದ್ಧ ಪ್ರತಿಭಟನೆ ನಡೆಸಲಾಗಿದ್ದು, ಇದರಲ್ಲಿ ಆರೋಪಿಗಳು ಮುಖ್ಯಮಂತ್ರಿಗಳಿಗೆ ಹಿಂದೂ ವಿರೋಧಿ ಸಿದ್ದರಾಮಯ್ಯ ಅವರನ್ನು ತೊಲಗಿಸಿ ಎಂದು ಕೂಗಿ ಅವರ ಪ್ರತಿಕೃತಿಯನ್ನು ಸಿಂಡಿಕೇಟ್ ಸರ್ಕಲ್ನ ಮಧ್ಯಭಾಗದಲ್ಲಿ ತಂದು ನಿಲ್ಲಿಸಿದ್ದರು. ಆರೋಪಿಗಳ ಪೈಕಿ ನಗರಸಭೆ ಸದಸ್ಯ ಗಿರೀಶ್ ಅಂಚನ್ ಹಾಗೂ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮುಖ್ಯ ಮಂತ್ರಿ ಸಿದ್ದರಾಮಯ್ಯರವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದಿರುವುದಾಗಿ ದೂರಲಾಗಿದೆ. ನಂತರ ಆರೋಪಿ ಅಭಿರಾಜ್ ಶೆಟ್ಟಿ ಪೆಟ್ರೋಲ್ ಬಾಟಲಿಯಿಂದ ಪ್ರತಿಕೃತಿಗೆ ಬೆಂಕಿ ಹಚ್ಚಿದ್ದಾರೆ. ಇವರು ಗುಂಪುಗಳ ನಡುವೆ ದ್ವೇಷ, ಅಸೂಯೆ ಉಂಟಾಗು ವಂತೆ ಮಾಡಿ, ಶಾಂತಿ ಭಂಗ ತರುವ ಉದ್ದೇಶದಿಂದ ಮುಖ್ಯಮಂತ್ರಿಯನ್ನು ಅವಮಾನಿಸಿದ್ದಾರೆ. ಉದ್ದೇಶಪೂರ್ವಕವಾಗಿ ಒಂದು ವರ್ಗವನ್ನು ಪ್ರಚೋದಿಸುವ ಸಂಭವ ಇದೆಯೆಂದು ತಿಳಿದು ಕೂಡಾ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿ ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಸೌರಭ್ ಬಲ್ಲಾಳ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest Indian news

Popular Stories