ಮಣಿಪುರ ಹಿಂಸಾಚಾರದಲ್ಲಿ ಮಡಿದ ಯೋಧನ ಕುಟುಂಬಕ್ಕೆ ಮೂರು ತಿಂಗಳು ಕಳೆದರೂ ಪರಿಹಾರ ನೀಡದ ಕೇಂದ್ರ ಮತ್ತು ರಾಜ್ಯ ಸರ್ಕಾರ | ಸಂಕಷ್ಟದಲ್ಲಿ ಕುಟುಂಬ

ನವ ದೆಹಲಿ:ಮಣಿಪುರದ ಎರಡು ಸಮುದಾಯಗಳ ನಡುವಿನ ಗುಂಡಿನ ಚಕಮಕಿಯ ಸಂದರ್ಭದಲ್ಲಿ ಮೃತಪಟ್ಟ ಮೂರು ತಿಂಗಳ ನಂತರವೂ ಗಡಿ ಭದ್ರತಾ ಪಡೆಯ ಸೈನಿಕ ರಂಜಿತ್ ಯಾದವ್ ಅವರ ಕುಟುಂಬವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಯಾವುದೇ ಪರಿಹಾರಕ್ಕಾಗಿ ಪರಿಹಾರ ಪಡೆದಿಲ್ಲ. ಇದೀಗ ಇದರಿಂದಾಗಿ ಅವರ ಜೀವನ ನಿರ್ವಹಣೆ ಕಷ್ಟಕರವಾಗಿದೆ‌.

163 ಬೆಟಾಲಿಯನ್‌ನಲ್ಲಿ ನಿಯೋಜಿಸಲಾದ ಕಾನ್‌ಸ್ಟೆಬಲ್ ರಂಜಿತ್ ಯಾದವ್, ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಕಂಕಿನಾರಾದಲ್ಲಿ ನೆಲೆಸಿರುವ ಅವರ ಎಂಟು ಸದಸ್ಯರಿರುವ ಕುಟುಂಬದಲ್ಲಿ ಏಕೈಕ ಜೀವನಾಧಾರರಾಗಿದ್ದರು.

ಅವರ ಪತ್ನಿ ಕೌಶಲ್ಯ ಯಾದವ್ (34) ಹೇಳುವ ಪ್ರಕಾರ “ರಂಜಿತ್ ಅವರು ಮನೆಗೆ ಬಂದಿದ್ದ ಸಂದರ್ಭದಲ್ಲಿ ಅವರ ತಂಗಿಗೆ ಸೂಕ್ತವಾದ ವರನನ್ನು ಹುಡುಕುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದರು. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ನಮಗೆ ತಿಳಿದಿರಲಿಲ್ಲ” ಎಂದು ನೋವು ತೋಡಿಕೊಂಡಿದ್ದಾರೆ‌

ಕಳೆದ ನಾಲ್ಕು ತಿಂಗಳುಗಳಲ್ಲಿ, ಭಾರತದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಹಿಂಸಾಚಾರವು ಮೈತೆಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿದೆ. ಇದರ ಪರಿಣಾಮವಾಗಿ ರಂಜಿತ್ ಯಾದವ್ ಸೇರಿದಂತೆ 160 ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ.

ಕೌಶಲ್ಯ ಪರಿಹಾರಕ್ಕಾಗಿ ಮಣಿಪುರ ಸರ್ಕಾರವನ್ನು ಎರಡು ಬಾರಿ ಸಂಪರ್ಕಿಸಿದ್ದರು. ಆದರೆ ರಾಜ್ಯ ಸರಕಾರದಿಂದಾಗಲಿ ಕೇಂದ್ರ ಸರಕಾರದಿಂದಾಗಲಿ ಇನ್ನೂ ಹಣ ಪಡೆದಿಲ್ಲ ಎಂದು ಹೇಳಿದ್ದಾರೆ.

ಹಿಂಸಾಚಾರ ಭುಗಿಲೆದ್ದ ಮೇ 3 ರಿಂದ ಭದ್ರತೆಗಾಗಿ ರಂಜಿತ್ ಅವರನ್ನು ರಾಜ್ಯದಲ್ಲಿ ನಿಯೋಜಿಸಲಾಗಿತ್ತು. ಜೂನ್ 5ರ ರಾತ್ರಿ ಕೌಶಲ್ಯಾ ಜತೆ ದೂರವಾಣಿಯಲ್ಲಿ ಮಾತನಾಡಿದ್ದರು.

ಜೂನ್ 6 ರಂದು, ರಂಜಿತ್ ಅವರ ಎದೆಗೆ ಗುಂಡು ತಗುಲಿದೆ. ಅವರನ್ನು ಕಾಕ್ಚಿಂಗ್‌ನಲ್ಲಿರುವ ಜಿತನ್ ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ಯಲಾಯಿತು. ಅಲ್ಲಿ ಅವರು ಸಾವನ್ನಪ್ಪಿರುವುದು ಧೃಡಪಟ್ಟಿತು. ಸೆರೌ ಪ್ರಾಕ್ಟಿಕಲ್ ಹೈಸ್ಕೂಲ್‌ನಲ್ಲಿ ನಿಯೋಜಿಸಲಾಗಿದ್ದ ಬಿಎಸ್‌ಎಫ್ ಪಡೆಗಳನ್ನು ಗುರಿಯಾಗಿಸಿಕೊಂಡು ಶಂಕಿತ ಕುಕಿ ದುಷ್ಕರ್ಮಿಗಳು ಭಾರೀ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದೇ ದಿನ ಅಸ್ಸಾಂ ರೈಫಲ್ಸ್‌ನ ಇಬ್ಬರು ಯೋಧರೂ ಗಾಯಗೊಂಡಿದ್ದರು. ಅದೇ ದಿನ, ಅಂದರೆ ಜೂನ್ 6 ರಂದು ರಂಜಿತ್ ಅವರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

“ನಾನು ನಮ್ಮ 11 ವರ್ಷದ ಮಗುವಿಗೆ ಅವನ ತಂದೆ ಎಂದಿಗೂ ಹಿಂತಿರುಗುವುದಿಲ್ಲ ಎಂಬ ಸತ್ಯ ಹೇಳಿದೆ ”ಎಂದು ಕೌಶಲ್ಯ ಮಡುಗಟ್ಟಿದ ದುಃಖದೊಂದಿಗೆ ಮಾಧ್ಯಮದೊಂದಿಗೆ ಮಾತನಾಡಿದರು.

ಆಯುಷ್ ತಂದೆ ರಂಜಿತ್ ಯಾವುದೇ ಕ್ಷಣದಲ್ಲಿ ಹಿಂತಿರುಗಬಹುದು ಎಂಬ ನಂಬಿಕೆಯಿಂದ ಶಾಲೆಗೂ ಸರಿಯಾಗಿ ಹೋಗುತ್ತಿರಲಿಲ್ಲ. ಇದೀಗ ಸತ್ಯ ಹೇಳಿದ ನಂತರ ಶಾಲೆಗೆ ಮರಳಿದ್ದಾನೆ. ಭಾರತೀಯ ಸೇನೆಗೆ ಸೇರಲು ಬಯಸುತ್ತಾನೆ. ತಂದೆಯ ಸ್ಥಾನಕ್ಕೆ ಸೇರ್ಪಡೆಯಾಗಿ ದೇಶಕ್ಕಾಗಿ ಹೋರಾಡುವುದು ಅವನ ಹೊಸ ಕನಸು ಎಂದು ಅವರ ತಾಯಿ ಹೇಳಿದರು.

ಈ ಸಂದರ್ಭದಲ್ಲಿ ಅವರು ಮಣಿಪುರದ ಸಮುದಾಯಗಳಿಗೆ ಶಾಂತಿ ಕಾಪಾಡುವಂತೆ ವಿನಂತಿಸಿದ್ದಾರೆ.

ಯಾದವ್‌ಗೆ ಇಬ್ಬರು ಸಹೋದರಿಯರಿದ್ದರು. ಬುಲಿ (21) ಮತ್ತು ಊರ್ಮಿಳಾ (32). ಬುಲಿ ದೃಷ್ಟಿಹೀನ. ಅವರು ಮತ್ತು ಅವರ ಪತ್ನಿ ಮತ್ತು ಮಗುವಿನ ಜೊತೆಗೆ, ಅವನಿಗೆ ಸಂಜೀತ್ (26) ಎಂಬ ಸಹೋದರ ಮತ್ತು ಅವನ ಮೇಲೆ ಅವಲಂಬಿತರಾದ ಅವನ ವೃದ್ಧ ತಂದೆ ತಾಯಿಯೂ ಇದ್ದರು.

“ಹಣದುಬ್ಬರದ ಈ ಕಾಲದಲ್ಲಿ ಒಬ್ಬ ವ್ಯಕ್ತಿಯೂ ಬದುಕಲು ಸಾಧ್ಯವಿಲ್ಲ, ನಾನು ಹೇಗೆ ಸಂಪಾದಿಸಬೇಕು” ಎಂದು ಹೇಳುವ ಕೌಶಲ್ಯ, ಪಶ್ಚಿಮ ಬಂಗಾಳ ಸರ್ಕಾರ ಕೂಡ ಏನನ್ನೂ ಮಾಡಿಲ್ಲ ಎಂದು ಹೇಳುತ್ತಾರೆ.

10ನೇ ತರಗತಿ ಪದವೀಧರೆಯಾಗಿರುವ ಕೌಶಲ್ಯಾ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಅನೇಕ ರಾಜಕಾರಣಿಗಳು ಕುಟುಂಬವನ್ನು ಭೇಟಿ ಮಾಡಿದ್ದಾರೆ ಎಂದ ಅವರು ಯಾರು ಸಹಾಯ ಮಾಡಿಲ್ಲ. ದೈನಂದಿನ ಖರ್ಚಿಗೆ ಕೌಶಲ್ಯಾ ಸಾಲ ಮಾಡಬೇಕಾಗಿ ಬಂತು ಎಂದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂನ್ 1 ರಂದು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಹಿಂಸಾಚಾರದಲ್ಲಿ ಮಡಿದವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಗಳ ಕಚೇರಿ ಕಕ್ಚಿಂಗ್‌ನಿಂದ ಪಡೆದ ಮಾಹಿತಿಯು ಆರು ಜನರು 5 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ (ಕೇಂದ್ರ ಸರ್ಕಾರದ ಪಾಲು) ಪಡೆದಿದ್ದಾರೆ ಎಂದು ತೋರಿಸುತ್ತದೆ. ದಿ ವೈರ್ ಅಂತರ್ಜಾಲ ಮಾಧ್ಯಮ ಪಟ್ಟಿ ಪರಿಶೀಲಿಸಿದಾಗ ರಂಜಿತ್ ಅವರ ಹೆಸರು ಪಟ್ಟಿಯಲ್ಲಿ ಇರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

Latest Indian news

Popular Stories