ಮಣಿಪುರ ಹಿಂಸಾಚಾರ: ಪೊಲೀಸ್ ಔಟ್‌ಪೋಸ್ಟ್‌ನಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ ಗುಂಪುಗಳು, ಘರ್ಷಣೆಯಲ್ಲಿ ಒಬ್ಬ ಪೋಲೀಸ್ ಸಿಬ್ಬಂದಿ ಹತ್ಯೆ

ಇಂಫಾಲ: ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಗುಂಪುಗಳು ಎರಡು ಭದ್ರತಾ ಪೋಸ್ಟ್‌ಗಳನ್ನು ಧ್ವಂಸಗೊಳಿಸಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಗುರುವಾರ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಷ್ಣುಪುರ್ ಜಿಲ್ಲೆಯ ಕೌತ್ರುಕ್‌ನಲ್ಲಿ ಸಶಸ್ತ್ರ ದಾಳಿಕೋರರು ಭದ್ರತಾ ಪಡೆಗಳೊಂದಿಗೆ ಎನ್‌ಕೌಂಟರ್‌ನಲ್ಲಿ ತೊಡಗಿದಾಗ ಭದ್ರತಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ.

ಬಿಷ್ಣುಪುರದಲ್ಲಿರುವ ಮಣಿಪುರ ಸಶಸ್ತ್ರ ಪೊಲೀಸ್‌ನ 2ನೇ ಬೆಟಾಲಿಯನ್‌ನ ಕೀರೆನ್‌ಫಾಬಿ ಪೊಲೀಸ್ ಔಟ್‌ಪೋಸ್ಟ್ ಮತ್ತು ತಂಗಲವಾಯ್ ಪೊಲೀಸ್ ಔಟ್‌ಪೋಸ್ಟ್‌ಗೆ ಗುಂಪು ದಾಳಿ ಮಾಡಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ತೆಗೆದುಕೊಂಡು ಹೋಗಿದೆ ಎಂದು ಮಣಿಪುರ ಪೊಲೀಸರು ಗುರುವಾರ ತಡರಾತ್ರಿ ತಿಳಿಸಿದ್ದಾರೆ.

ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ ಜನಸಮೂಹವು ಅದೇ ಜಿಲ್ಲೆಯ ಹೀಂಗಾಂಗ್ ಪೊಲೀಸ್ ಠಾಣೆ ಮತ್ತು ಸಿಂಗ್‌ಜಮೇ ಪೊಲೀಸ್ ಠಾಣೆಯಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿತು ಆದರೆ ಭದ್ರತಾ ಪಡೆಗಳು ಅವರನ್ನು ಹಿಮ್ಮೆಟ್ಟಿಸಿದರು.

ಕೌಟ್ರುಕ್, ಹರಾಥೆಲ್ ಮತ್ತು ಸೆಂಜಮ್ ಚಿರಾಂಗ್ ಪ್ರದೇಶಗಳಲ್ಲಿ ಸಶಸ್ತ್ರ ದಾಳಿಕೋರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ ಇಬ್ಬರಿಗೆ ಬುಲೆಟ್ ಗಾಯಗಳಾಗಿವೆ ಎಂದು ಹೇಳಿಕೆ ತಿಳಿಸಿದೆ.

ಗುಂಡಿನ ದಾಳಿಗೆ ಪ್ರತಿದಾಳಿ ನಡೆಸಿದ ಭದ್ರತಾ ಪಡೆಗಳು ದಾಳಿಕೋರರನ್ನು ಓಡಿಸಿದರು.

Latest Indian news

Popular Stories