ಬೆಂಗಳೂರು: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ 100 ಕೋಟಿ ರೂ. ಬಡ್ಡಿರಹಿತ ಸಾಲ ನೀಡುವಂತೆ ಮತ್ತು 50 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸುವಂತೆ ಕೋರಿ, ಕಾರ್ಖಾನೆಯ ಆಡಳಿತ ಮಂಡಳಿಯು ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಕಾರ್ಖಾನೆಯ ಉನ್ನತ ಮಟ್ಟದ ನಿಯೋಗವು ತಮ್ಮ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ’ದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಅವರು ಈ ಮಾಹಿತಿ ನೀಡಿದ್ದಾರೆ.
ಬಬಲೇಶ್ವರ ತಾಲ್ಲೂಕಿನ ಕೃಷ್ಣಾ ನಗರದಲ್ಲಿರುವ ಈ ಕಾರ್ಖಾನೆಯು ಸಹಕಾರಿ ವಲಯದಡಿ ಇದ್ದು, ಸದ್ಯಕ್ಕೆ ಪ್ರತೀದಿನ 6,000 ಟನ್ ಕಬ್ಬು ಅರೆಯಲಾಗುತ್ತಿದೆ. ಇದನ್ನು 10 ಸಾವಿರ ಟನ್ ಮಟ್ಟಕ್ಕೆ ಏರಿಸಲು ಕಾರ್ಖಾನೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಹೀಗಾಗಿ, ಸರಕಾರದ ನೆರವು ಕೋರಲಾಗಿದೆ ಎಂದು ಅವರು ಹೇಳಿದರು.
ಕಾರ್ಖಾನೆಯಲ್ಲಿ ಸಕ್ಕರೆ ಉತ್ಪಾದನೆಯ ಜೊತೆಗೆ ಈಗ 18.14 ಮೆಗಾವ್ಯಾಟ್ ವಿದ್ಯುತ್ತನ್ನು ಕೂಡ ಉತ್ಪಾದಿಸಲಾಗುತ್ತಿದೆ. ಇದನ್ನು ಕೂಡ 55.14 ಮೆಗಾವ್ಯಾಟ್ ಪ್ರಮಾಣಕ್ಕೆ ಕೊಂಡೊಯ್ಯಲು ಅಲ್ಲಿನ ಆಡಳಿತ ಮಂಡಳಿಯು ತೀರ್ಮಾನಿಸಿದೆ. ಸರಕಾರವು ಬಡ್ಡಿರಹಿತ ಸಾಲ ನೀಡಿದರೆ ಅದನ್ನು ಏಳು ವರ್ಷಗಳಲ್ಲಿ ತೀರಿಸುವುದಾಗಿ ಆಡಳಿತ ಮಂಡಳಿ ತಿಳಿಸಿದೆ ಎಂದು ಅವರು ನುಡಿದರು.
ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗದಲ್ಲಿ ಬೀಳಗಿ ಶಾಸಕ ಜಿ.ಟಿ.ಪಾಟೀಲ, ಮಾಜಿ ಶಾಸಕ ಆನಂದ ನ್ಯಾಮಗೌಡ, ಕಾರ್ಖಾನೆಯ ಅಧ್ಯಕ್ಷ ಕುಮಾರ ದೇಸಾಯಿ, ಉಪಾಧ್ಯಕ್ಷ ಅಶೋಕ ಲಿಂಕಣ್ಣನವರ ಮತ್ತಿತರರು ಇದ್ದರು.