ಕೂಜಿಮಲೆಯಲ್ಲಿ ಕಾಣಿಸಿಕೊಂಡವರು ನಿಷೇಧಿತ ನಕ್ಸಲ್ ಸಂಘಟನೆಯ ಸದಸ್ಯರು: ಕೊಡಗು ಎಸ್ಪಿ ಸ್ಪಷ್ಟನೆ

ಮಡಿಕೇರಿ: ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಕೂಜಿಮಲೆಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಶಂಕಿತ ವ್ಯಕ್ತಿಗಳು ನಿಷೇಧಿತ ನಕ್ಸಲ್ ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಡಿದ ಅವರು, ಮಾರ್ಚ್ 17ರಂದು ಸಂಜೆ ಶಸ್ತ್ರ ಸಜ್ಜಿತ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಕೂಜಿಮಲೆ ರಬ್ಬರ್ ಎಸ್ಟೇಟ್‌ನ ಅಂಗಡಿಗೆ ಆಗಮಿಸಿ ದಿನಸಿ ಸಾಮಾಗ್ರಿಗಳನ್ನು ಖರೀದಿಸಿದ್ದಾರೆ. ಈ ವೇಳೆ ಕನ್ನಡ ಭಾಷೆಯಲ್ಲಿ ತಮ್ಮನ್ನು ನಕ್ಸಲ್ ಹೋರಾಟಗಾರರು ಎಂದೇ ಪರಿಚಯಿಸಿಕೊಂಡಿದ್ದಲ್ಲದೆ, ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ತಿಳಿಸಿದ್ದಾರೆ. ತನಿಖೆ ಸಂದರ್ಭ ಅಂಗಡಿ ಮಾಲಕರಿಗೆ ಕೆಲವು ಫೋಟೊಗಳನ್ನು ತೋರಿಸಿದಾಗ ಓರ್ವ ವ್ಯಕ್ತಿ ನಕ್ಸಲ್ ಮುಖಂಡ ವಿಕ್ರಂ ಗೌಡನನ್ನು ಹೋಲುತ್ತಿರುವುದಾಗಿ ಹೇಳಿದ್ದಾರೆ. ಇನ್ನುಳಿದ ಮೂವರ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ವಿವರಿಸಿದರು.

ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.
ಡ್ರೋನ್ ಕ್ಯಾಮರಾ ಮೂಲಕ ಶೋಧ: ಡ್ರೋನ್ ಕ್ಯಾಮರಾ, ನಿಗ್ರಹ ದಳದ ಕಮಾಂಡೋಗಳ ಹಾಗೂ ಶ್ವಾನದಳಗಳ ಮೂಲಕ ಶಸ್ತ್ರ ಸಜ್ಜಿತ ಶಂಕಿತ ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕೂಜಿಮಲೆ ಅರಣ್ಯ ಪ್ರದೇಶ ದಟ್ಟ ಕಾಡಿನ ಸಹಿತ ತೀವ್ರ ಕಣಿವೆಗಳಿಂದ ಕೂಡಿರುವ ಹಿನ್ನೆಲೆಯಲ್ಲಿ ಈ ರೀತಿಯ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲ್ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಜಿಲ್ಲೆಗೆ ಆಗಮಿಸಿ ಕೂಂಬಿಂಗ್ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

Latest Indian news

Popular Stories