ಕಾರವಾರ : ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸೈಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೇವಭಾಗದ ಕಡಲ ಕೊರೆತ ಸ್ಥಳ ಪರಿಶೀಲಿಸಿ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ದೇವಭಾಗದಿಂದ ಮಾಜಾಳಿ ವರೆಗೆ ಅಂದಾಜು 8 ರಿಂದ 15 ಕೋಟಿ ವೆಚ್ವದಲ್ಲಿ ರಸ್ತೆ ನಿರ್ಮಾಣವಾಗಿದ್ದು, ತಡೆಗೊಡೆ ಕಾಮಗಾರಿ ಮಾಡದ ಕಾರಣ ಸಮುದ್ರದ ನೀರು ರಸ್ತೆ ದಾಟಿ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಬಿಡುಗಡೆಯಾದ 10 ಕೋಟಿ ರೂ. ಗಳನ್ನು 2022 ನೇ ಸಾಲಿನಲ್ಲಿ ಸರ್ಕಾರ ಹಿಂದೆ ಪಡೆದಿದೆ. ಬಂದರು ಇಲಾಖೆಯಿಂದ ಮತ್ತೆ ವರದಿ ಪಡೆದುಕೊಂಡು 10 ಕೋಟಿ ಅನುದಾನ ಬಿಡುಗಡೆ ಮಾಡಲು ಸರಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಮಾಜಾಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಂದರು ಕಾಮಗಾರಿಯನ್ನು ಮೀನುಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಬೇಕು ಸ್ಥಳೀಯ ಮೀನುಗಾರರ ದೋಣಿ ನಿಲ್ಲಿಸಲು ಸೂಕ್ತ ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ತಿಳ್ ಮಾತಿ ಬೀಚ್ ಅಭಿವೃದ್ಧಿ :
ಪ್ರವಾಸೋದ್ಯಮ ಉದ್ದೇಶದಿಂದ ಗೋವಾ ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ
ತಿಳ್ ಮಾತಿ ಕಡಲ ತೀರವನ್ನು ಅಭಿವೃದ್ಧಿ ಪಡಿಸಲು ಈ ಹಿಂದೆ ನಬಾರ್ಡ್ ನಲ್ಲಿ ಓಂ ಆಕಾರದಲ್ಲಿ ನೀಲನಕ್ಷೆ ಸಿದ್ದಪಡಿಸಿ ಅನುಮೋದನೆ ಪಡೆದಿದ್ದರೂ, ಕಾಮಗಾರಿ ಆರಂಭವಾಗದೇ ಹಾಗೇ ಉಳಿದುಕೊಂಡಿದ್ದು, ಈಗ ಪುನಃ ತಿಳ್ ಮಾತಿ ಸಂಪರ್ಕಿಸಲು ತೂಗು ಸೇತುವೆ ಸೇರಿದಂತೆ ಈ ಹಿಂದೆ ರೂಪಿಸಿರುವ ನೀಲನಕ್ಷೆಯಂತೆ ಕಾಮಗಾರಿ ಕೈಗೊಳ್ಳಲು ಬಂದರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೇರವಡಿಯ ಸೇತುವೆ ಹಾಗೂ ಗೋಕರ್ಣ ಮತ್ತು ಅಂಕೋಲಾ ಸಂಪರ್ಕಿಸುವ ಗಂಗವಾಳಿ ನದಿಗೆ ಅಡ್ಡಲಾಗಿ ಮಂಜುಗುಣಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ನಿಶ್ಚಲ್ ನರೋನಾ, ಬಂದರು ಇಲಾಖೆ ಇಇ ರಾಜಕುಮಾರ್, ಮತ್ತಿತರರು ಇದ್ದರು.
ನಂತರ ಕದ್ರಾ ಡ್ಯಾಂ ಗೆ ತೆರಳಿದ ಶಾಸಕರು, ಡ್ಯಾಂ ತುಂಬಿದ ಹಿನ್ನಲೆ ಬಾಗಿನ್ ಅರ್ಪಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ನಿಶ್ಚಲ್ ನರೋನಾ, ಕೆಪಿಸಿಎಲ್ ಅಧಿಕಾರಿಗಳು, ಕದ್ರಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಹನುಮವ್ವ ಮತ್ತಿತರರು ಇದ್ದರು.
…..