ಮೋದಿಯವರು ಜನರನ್ನು ಪ್ರಚೋದಿಸಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ: ಖರ್ಗೆ | ಜೂನ್ 4ರ ನಂತರ ಒಳ್ಳೆ ದಿನ ಬರುತ್ತದೆ; ಉದ್ಧವ್ ಠಾಕ್ರೆ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಪ್ರಚಾರ ಭಾಷಣಗಳ ಮೂಲಕ ಜನರ ಮನಸ್ಸಿನಲ್ಲಿ ಪ್ರಚೋದನೆ ತುಂಬಿಸಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನಾ (UBT) ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಇತರ ನಾಯಕರು ಭಾಗವಹಿಸಿದ್ದ ಇಂಡಿಯಾ ಮೈತ್ರಿಕೂಟದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಖರ್ಗೆ ಮಾತನಾಡಿದ್ದಾರೆ.

ಮೋದಿಯವರಿಗಿಂತ ಮೊದಲು ಈ ದೇಶದ ಯಾವುದೇ ಪ್ರಧಾನ ಮಂತ್ರಿಗಳು ಜನರನ್ನು ಪ್ರಚೋದಿಸುವ ಭಾಷಣ ಮಾಡುತ್ತಿರಲಿಲ್ಲ. ಮೋದಿಯವರು ಪ್ರಜಾಪ್ರಭುತ್ವದ ಬಗ್ಗೆ ಪದೇ ಪದೇ ಮಾತನಾಡುತ್ತಾರೆ ಆದರೆ ಪ್ರಜಾಪ್ರಭುತ್ವದ ತತ್ವಗಳಿಗೆ ಬದ್ಧರಾಗಿಲ್ಲ ಎಂದು ಆರೋಪಿಸಿದರು.

ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಾಂಗ್ರೆಸ್ ಕೆಡವಿ ಹಾಕಲಿದೆ ಮತ್ತು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸಂವಿಧಾನದ 370 ನೇ ವಿಧಿಯನ್ನು ಮರುಸ್ಥಾಪಿಸುತ್ತದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ನಾವು ಯಾರನ್ನೂ ಕೆಡವಿ ಹಾಕುವ ಪ್ರಯತ್ನ ಮಾಡಿಲ್ಲ, ಕಾಂಗ್ರೆಸ್ ಯಾವತ್ತಿಗೂ ಮಾಡದಿರುವ ಅಥವಾ ಕಾರ್ಯಗತಗೊಳಿಸಲು ಸಾಧ್ಯವಾಗದ ವಿಷಯಗಳನ್ನು ಮಾಡುತ್ತದೆ ಎಂದು ಸುಳ್ಳುಹೇಳುವ ಅಭ್ಯಾಸ ಮೋದಿಯವರಿಗಿದೆ ಎಂದರು.

370ನೇ ವಿಧಿ ಕುರಿತು ತಮ್ಮ ಪಕ್ಷದ ನಿಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ನಾನು ಮೋದಿಯವರ ಹೇಳಿಕೆಗೆ ಜವಾಬ್ದಾರನಲ್ಲ, ನಾವು ನಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದನ್ನು ಜಾರಿಗೆ ತರುತ್ತೇವೆ ಅಷ್ಟೆ ಎಂದರು.

ಪ್ರಧಾನಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಮೋದಿಯವರು ಹೋದಲ್ಲೆಲ್ಲಾ ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ, ಸಮಾಜವನ್ನು ವಿಭಜಿಸುವ ಮಾತನಾಡುತ್ತಾರೆ ಎಂದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಪ್ರಣಾಳಿಕೆ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಈಗ ಅದು ಮಾವೋವಾದಿ ಪ್ರಣಾಳಿಕೆ ಎಂದು ಹೇಳುತ್ತಿದ್ದಾರೆ ಎಂದು ಖರ್ಗೆ ಹೇಳಿದರು.

ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೀಸಲಾತಿ ಮುಂದುವರಿಯುತ್ತದೆ ಮತ್ತು ಅದನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಖರ್ಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಇಂಡಿಯಾ ಬ್ಲಾಕ್ ನೇತೃತ್ವದ ಸರ್ಕಾರವು ಅಧಿಕಾರ ವಹಿಸಿಕೊಂಡ ಜೂನ್ 4 ರಿಂದ (ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದಾಗ) ದೇಶದಲ್ಲಿ ‘ಅಚ್ಛೇ ದಿನ್’ ಬರಲಿದೆ” ಎಂದು ಹೇಳಿದರು.

ಪ್ರಧಾನಿ ಮೋದಿಯವರು ನಮ್ಮನ್ನು ‘ನಕ್ಲಿ’ (ನಕಲಿ) ಶಿವಸೇನೆ ಎಂದು ಕರೆಯುತ್ತಾರೆ, ನಾಳೆ ಅವರು ಆರ್‌ಎಸ್‌ಎಸ್ ನ್ನು ‘ನಕ್ಲಿ ಸಂಘ’ ಎಂದು ಕರೆಯಬಹುದು”. ಉದ್ಯೋಗದಂತಹ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ನಮ್ಮ ರ‍್ಯಾಲಿಯಲ್ಲಿ ಪಾಕಿಸ್ತಾನದ ಧ್ವಜದ ವಿಷಯ ತರುತ್ತಿದ್ದಾರೆ ಎಂದರು.

ಅಧಿಕಾರಕ್ಕೆ ಬಂದ ನಂತರ, ದೇಶದ ಎಲ್ಲಾ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವುದು ಇಂಡಿಯಾ ಬ್ಲಾಕ್ ಸರ್ಕಾರದ ಕರ್ತವ್ಯವಾಗಿದೆ ಎಂದು ಶರದ್ ಪವಾರ್ ಈ ಸಂದರ್ಭದಲ್ಲಿ ಹೇಳಿದರು. ವಿರೋಧ ಪಕ್ಷದ ಮೈತ್ರಿ ಸರ್ಕಾರವು ಅಧಿಕಾರಕ್ಕೆ ಬಂದರೆ ಪ್ರಸ್ತುತ ಜಿಎಸ್‌ಟಿ ಬದಲಿಗೆ ಸರಳ, ಏಕ ದರದ ಜಿಎಸ್‌ಟಿಯನ್ನು ಜಾರಿಗೆ ತರುತ್ತೇವೆ ಎಂದು ಖರ್ಗೆ ಹೇಳಿದರು.

ನಾವು ಆಹಾರ ಭದ್ರತಾ ಕಾಯ್ದೆಯನ್ನು ಪರಿಚಯಿಸಿದ್ದೇವೆ, ಆದರೆ ಪ್ರಧಾನಿ ಮೋದಿ ಉಚಿತ ಪಡಿತರ ಪೂರೈಕೆಯ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

Latest Indian news

Popular Stories