ರಾಜ್ಯಕ್ಕೆ ಮುಂಗಾರು ಪ್ರವೇಶ | ದಕ್ಷಿಣ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ

ಬೆಂಗಳೂರು: ನಿರೀಕ್ಷೆಯಂತೆ ರವಿವಾರ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದು, ದಕ್ಷಿಣ ಕರ್ನಾಟಕದ ಬಹುತೇಕ ಭಾಗವನ್ನು ಮುಂಗಾರು ಆವರಿಸಿದೆ. ಮುಂದಿನ 2 – 3 ದಿನಗಳಲ್ಲಿ ರಾಜ್ಯದ ಉಳಿದ ಭಾಗಗಳಿಗೂ ಮುಂಗಾರು ವ್ಯಾಪಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ಬೆಂಗಳೂರು ನಗರ ಸಹಿತ ದಕ್ಷಿಣ ಕರ್ನಾಟಕದ ಬಹುತೇಕ ಭಾಗಕ್ಕೆ ಮುಂಗಾರು ಪ್ರವೇಶಿಸಿದೆ. ಕರ್ನಾಟಕದ ಉಳಿದ ಭಾಗದಲ್ಲಿ ಮುಂಗಾರು ಮಳೆಯು 2-3 ದಿನಗಳಲ್ಲಿ ಪ್ರವೇಶವಾಗುವ ಅನುಕೂಲಕರ ಪರಿಸ್ಥಿತಿಗಳು ನಿರ್ಮಾಣಗೊಂಡಿವೆ. ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ ಜೂ. 6ರ ವರೆಗೆ ಹಗುರದಿಂದ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ. 40ರಿಂದ 50 ಕಿ.ಮೀ. ವೇಗದಲ್ಲಿ ಬಿರುಗಾಳಿಯೂ ಬೀಸಲಿದೆ. ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಹಾಸನ, ಮೈಸೂರು, ಮಂಡ್ಯ, ಕೊಡಗು ಜಿಲ್ಲೆಗಳ ಕೆಲವು ಕಡೆ ಇನ್ನೂ ಎರಡು ಮೂರು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಜೂ. 6ರ ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞ ಸಿ.ಎಸ್‌. ಪಾಟೀಲ್‌ ತಿಳಿಸಿದ್ದಾರೆ.

ಈ ನಡುವೆ ಶನಿವಾರ ರಾತ್ರಿ ಹಾಗೂ ರವಿವಾರ ಹಳೆ ಮೈಸೂರು ಭಾಗದ ಹಲವೆಡೆ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಶನಿವಾರ ರಾತ್ರಿ ಬಿದ್ದ ಭಾರೀ ಮಳೆಗೆ 15ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ಹತ್ತಾರು ಗ್ರಾಮಗಳಲ್ಲಿ ಇಡೀ ರಾತ್ರಿ ವಿದ್ಯುತ್‌ ಸರಬರಾಜು ಇಲ್ಲದೇ ಕಗ್ಗತ್ತಲಾಗಿದ್ದವು.

Latest Indian news

Popular Stories