ಕಾರವಾರ: ಜಿಲ್ಲೆಯಲ್ಲಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಹೆಚ್ಚಿನ ಅವಕಾಶ ಮಾಡಿಸಿಕೊಡುವ ಪ್ರಯತ್ನ ಮಾಡಿದ್ದೇವೆ ಎಂದು ಕಾಂಗ್ರೆಸ್ ಹಿರಿಯ ಧುರೀಣ ಶಾಸಕ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ. ದೇಶಪಾಂಡೆ ಹೇಳಿದರು.
ಕಾರವಾರ ಬಳಿ ಅಸ್ನೋಟಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪಕ್ಷದ ಜಿಲ್ಲೆಯ ಜಿಲ್ಲಾಧ್ಯಕ್ಷರು, ಶಾಸಕರು, ಮಂತ್ರಿಗಳು ನಿಗಮ ಮಂಡಳಿಯಲ್ಲಿ ನೇಮಕ ಕುರಿತು ಕಾರ್ಯಪ್ರವೃತ್ತರಾಗಿದ್ದಾರೆ. ಕಾರ್ಯಕರ್ತರಿಗೆ ಅಧಿಕಾರ ಕೊಡಿಸುವುದು ನಮ್ಮ ಜವಬ್ದಾರಿಯಾಗಿದ್ದು ಪ್ರತಿ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಅವಕಾಶ ಮಾಡಿ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಈಗಾಗಲೇ ನಿಗಮ ನೇಮಕಗಳ ಕುರಿತು ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ ಇದ್ದು ಅವರು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಮಾಡಿಸಿಕೊಡುವ ವಿಶ್ವಾಸವಿದೆ. ಎಲ್ಲಾ ಕಾರ್ಯಕರ್ತರಿಗೂ ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ. ಸದ್ಯ ಎಷ್ಟು ಜನರಿಗೆ ಅವಕಾಶ ಸಿಕ್ಕಿದೆ ಎಂದು ಹೇಳಲು ಆಗುವುದಿಲ್ಲ ಎಂದರು.
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದರೂ, ಕಾರ್ಯಕರ್ತರಿಗೆ ಅಧಿಕಾರ ಸಿಗದ ಬಗ್ಗೆ ಪ್ರತಿಕ್ರಿಯಿಸಿದ ಅವರು , ಇಲ್ಲಿ ತಾರತಮ್ಯ ಆಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಗಮನಕ್ಕೆ ತಂದಿದ್ದೇವೆ ಎಂದರು.
ಮುಖ್ಯಮಂತ್ರಿ ಆಗಿ ಮುಂದಿನ ಮೂರು ಮುಕ್ಕಾಲು ವರ್ಷ ಸಿದ್ದರಾಮಯ್ಯನವರೇ ಇರುತ್ತಾರೆ. ಸಿಎಂ ರೇಸ್ ನಲ್ಲಿ ನಾನಿಲ್ಲ ಎಂದು ಶಾಸಕ ದೇಶಪಾಂಡೆ ಹೇಳಿದರು.
ಮೈಸೂರಿನಲ್ಲಿ ನಾನು ರಾಮಕೃಷ್ಣ ಪರಮಹಂಸರ ಬಗ್ಗೆ ಮಾತನಾಡಿದ ಒಂದೇ ಒಂದು ಮಾತು ಸಹ ಮಾಧ್ಯಮದಲ್ಲಿ ಬರಲಿಲ್ಲ. ನಾನು, ‘ಸಿದ್ದರಾಮಯ್ಯ ನಮ್ಮ ನಾಯಕರು, ಅವರೇ ಐದು ವರ್ಷ ಸಿಎಂ’ ಆಗಿರುತ್ತಾರೆ ಎಂದಿದ್ದೆ. ನಾನು ಒಂಬತ್ತು ಬಾರಿ ಆಯ್ಕೆಯಾಗಿದ್ದು, ಆಸೆ ಆಕಾಂಕ್ಷೆ ಇಲ್ಲ ಅಂದರೆ ಜನರು ತಪ್ಪು ತಿಳಿದುಕೊಳ್ಳುತ್ತಾರೆ. ನನಗೆ ಸದ್ಯ ಸಿಎಂ ಬಯಕೆ ಇಲ್ಲ. ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಪುನರುಚ್ಚರಿಸಿದರು.
ಸಿದ್ದರಾಮಯ್ಯ ರಾಜೀನಾಮೆ ಕುರಿತು ಮಾತನಾಡಿದ ದೇಶಪಾಂಡೆ ಅವರು, ಸಿದ್ದರಾಮಯ್ಯಯಾಕೆ ರಾಜೀನಾಮೆ ಕೊಡಬೇಕು?, ಏನು ಕಾರಣವಿದೆ ? ಏನು ತಪ್ಪು ಮಾಡಿದ್ದಾರೆ? , ಉದ್ದೇಶಪೂರ್ವಕವಾಗಿ ಬಿಜೆಪಿ ಸತ್ಯಕ್ಕೆ ದೂರವಾದ ಅಂಶ ಎಬ್ಬಿಸಿ ಗೊಂದಲ ಉಂಟು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಯಾವ ತಪ್ಪು ಮಾಡಿಲ್ಲ. ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದರು.