ಉತ್ತರ ಪ್ರದೇಶದಾದ್ಯಂತ ಸಿಡಿಲು ಬಡಿದು ಒಂದೇ ದಿನ 38ಕ್ಕೂ ಹೆಚ್ಚು ಜನ ಮೃತ್ಯು

ಉತ್ತರಪ್ರದೇಶ: ಸಿಡಿಲು ಬಡಿದು ಉತ್ತರ ಪ್ರದೇಶದಾದ್ಯಂತ ಬುಧವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ 38 ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಕಳೆದ ಕೆಲ ದಿನಗಳಿಂದ ಉತ್ತರಪ್ರದೇಶದಾದ್ಯಂತ ಸಿಡಿಲು ಸಹಿತ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಅದರಂತೆ ಪ್ರತಾಪ್‌ಗಢದಲ್ಲಿ ಅತೀ ಹೆಚ್ಚು 11 ಮಂದಿ ಮೃತಪಟ್ಟರೆ, ಸುಲ್ತಾನ್‌ಪುರದಲ್ಲಿ ಏಳು, ಚಂದೌಲಿಯಲ್ಲಿ ಆರು, ಮೈನ್‌ಪುರಿಯಲ್ಲಿ ಐದು ಮತ್ತು ಪ್ರಯಾಗ್‌ರಾಜ್‌ನಲ್ಲಿ ನಾಲ್ಕು, ಔರೈಯಾ, ಡಿಯೋರಿಯಾ, ಹತ್ರಾಸ್, ವಾರಣಾಸಿ ಮತ್ತು ಸಿದ್ಧಾರ್ಥನಗರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ, ಅಲ್ಲದೆ ಹತ್ತಕ್ಕೂ ಹೆಚ್ಚು ಮಂದಿ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏತನ್ಮಧ್ಯೆ, ಪೂರ್ವ ಉತ್ತರ ಪ್ರದೇಶದ ಚಂದೌಲಿಯಲ್ಲಿ ಸಿಡಿಲು ಬಡಿದು ಹಲವು ಮಂದಿ ಗಾಯಗೊಂಡಿದ್ದು ಪ್ರಸ್ತುತ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಬುಧವಾರ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಸಿಡಿಲು ಸಹಿತ ಭಾರಿ ಮಳೆಯಾಗಿದೆ.

ಮೃತರಲ್ಲಿ ಹೆಚ್ಚಿನವರು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರು, ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದವರು, ಸೇರಿದಂತೆ ಮೀನುಗಾರಿಕೆ ನಡೆಸುತ್ತಿದ್ದವರು ಸೇರಿದ್ದಾರೆ ಎನ್ನಲಾಗಿದೆ.

Latest Indian news

Popular Stories