ಬಹು ಚರ್ಚಿತ ಮುಡಾ ಹಗರಣದ ಪ್ರಾಸಿಕ್ಯೂಷನ್ ತಡೆಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಂ ನಾಗಪ್ರಸನ್ನ ಅವರ ಪೀಠ ವಜಾಗೊಳಿಸಿದೆ. ಈ ಆದೇಶದೊಂದಿಗೆ ಮುಡಾ ಹಗರಣದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ವಿರೋಧ ಪಕ್ಷ ಬಿಜೆಪಿಯ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಈತನ್ಮಧ್ಯೆ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಬ್ಯಾಟ್ ಬೀಸಿದ್ದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ “ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಎಲ್ಲ ಬೆಳವಣಿಗೆಯ ನಡುವೆ ಸಿದ್ದರಾಮಯ್ಯ ಮುಂದಿನ ನಡೆ ಏನಾಗಿರಬಹುದು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ದ್ವಿ ಸದಸ್ಯರ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಲು ಅವಕಾಶ:
ಇದೀಗ ಪ್ರಾಸಿಕ್ಯೂಷನ್ ತಡೆಕೋರಿ ಸಲ್ಲಿಸಿದ್ದ ಅರ್ಜಿಯನ್ನು ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ವಜಾಗೊಳಿಸಿ ಆದೇಶ ಹೊರಡಿಸಿದೆ. ಆದರೆ ಈ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ವಕೀಲರು ದ್ವಿ ಸದಸ್ಯರ ವಿಭಾಗೀಯ ಪೀಠದ ಎದುರು ಅರ್ಜಿ ಸಲ್ಲಿಸಲು ಅವಕಾಶವಿದೆ. ಈಗ ಇರುವ ಮಾಹಿತಿಯ ಪ್ರಕಾರ ಸೋಮವಾರ ವಿಭಾಗೀಯ ಪೀಠದಲ್ಲಿ ಆದೇಶ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
2. ತನಿಖೆಗೆ ಸಹಕಾರ:
ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಾದರೆ ತನಿಖೆಗೆ ಸಂಪೂರ್ಣ ಸಹಕಾರ ನೀಡಿ. ದಾಖಲೆಗಳನ್ನು ತನಿಖಾ ಏಜೆನ್ಸಿಗಳ ನಡುವೆ ಪ್ರಸ್ತುತ ಪಡಿಸಿ ಯಾವುದೇ ಅಕ್ರಮ ನಡೆಸದೆ ಇದ್ದರೆ ಕ್ಲೀನ್ ಚಿಟ್ ಆಗಿ ಹೊರ ಬರುವ ಅವಕಾಶವೂ ಇದೆ.
3. ಈಗಾಗಲೇ ಸಚಿವ ಸಂಪುಟ ಮುಖ್ಯಮಂತ್ರಿ ಪರವಾಗಿರುವುದರಿಂದ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶದ ವಿರುದ್ಧ ಹೋರಾಟ ಮುಂದುವರಿಸಬಹುದು. ಈ ಪ್ರಕರಣವು ಭ್ರಷ್ಟಾಚಾರ ಆರೋಪಕ್ಕಿಂತ ರಾಜಕೀಯ ಕೆಸರೆರೆಚಾಟಕ್ಕೆ ಹೆಚ್ಚು ವೇದಿಕೆಯಾಗಿರುವ ಕಾರಣ ಅದನ್ನು ರಾಜಕೀಯವಾಗಿಯೇ ಸಿದ್ದರಾಮಯ್ಯ ಎದುರಿಸುವ ಸಾಧ್ಯತೆಯೂ ಹೆಚ್ಚಿದೆ.
ಮುಡಾ ವಿವಾದದಲ್ಲಿ ಪ್ರಾಸಿಕ್ಯೂಷನ್’ಗೆ ಅನುಮತಿ ಪಡೆದಿರುವ ಖಾಸಗಿ ದೂರುದಾರರಾದ ಟಿ.ಜೆ ಅಬ್ರಹಾಮ್, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಕುಮಾರ್ ಸಲ್ಲಿಸಿದ ದೂರನ್ನಾಧರಿಸಿ ಪ್ರಕರಣ ದಾಖಲಾದರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನಿನ ಪ್ರಕ್ರಿಯೆಗೆ ಒಳಗಾಗ ಬೇಕಾಗಿದ್ದು ಅವರ ವಿರುದ್ಧ ಇರುವ ಆರೋಪಗಳ ಕುರಿತು ತನಿಖೆ ನಡೆಯಲಿದೆ.
ಇನ್ನು ಮುಖಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಕರಣ ದಾಖಲಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡುವುದು ಕಷ್ಟ. ಯಾಕೆಂದರೆ ಈ ಆರೋಪಗಳು ಈಗಾಗಲೇ ರಾಜಕೀಯ ಪ್ರೇರಿತ ಮತ್ತು ಪೂರ್ವಗ್ರಹ ಪೀಡಿತ ಎಂಬುವುದನ್ನು ಹೈಕಮಾಂಡ್’ಗೆ ಮನವರಿಕೆ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಬಿಜೆಪಿ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುತ್ತಿದೆ ಎಂಬ ಆರೋಪಕ್ಕೆ ಈ ಪ್ರಕರಣವು ಪುಷ್ಠಿ ನೀಡುತ್ತಿರುವುದರಿಂದ ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿ ಗಟ್ಟಿಯಾಗಿ ನಿಂತಿದ್ದು ಬಿಜೆಪಿಯ “ರಾಜೀನಾಮೆ” ಯ ಮಹದಾಸೆ ಈಡೇರುವುದು ಸದ್ಯಕ್ಕೆ ಕಷ್ಟ!