ಮುಂಬೈ: ಬಿರುಗಾಳಿ ಮಳೆಯಿಂದ ಜನಜೀವನ ಅಸ್ತವ್ಯಸ್ತ, ವಿಮಾನ, ರೈಲು, ಮೆಟ್ರೋ ಸಂಚಾರಕ್ಕೆ ಅಡ್ಡಿ | ಮೂವರು ಮೃತ್ಯು, 59 ಮಂದಿಗೆ ಗಾಯ

ಮುಂಬೈ: ನೆರೆಯ ವಾಣಿಜ್ಯ ನಗರಿಯಲ್ಲಿ ಅಬ್ಬರಿಸುತ್ತಿರುವ ಬಿರುಗಾಳಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿಮಾನ, ಮೆಟ್ರೋ ಹಾಗೂ ಸ್ಥಳೀಯ ರೈಲುಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ತೆಂಗಿನ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೇಘವಾಡಿ ನಾಕಾದಲ್ಲಿ ನಡೆದಿದೆ. ಕೂಡಲೇ ಸ್ಥಳೀಯರು ಆಟೋ ಚಾಲಕ ಹಯಾತ್ ಖಾನ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ದಾದರ್, ಕುರ್ಲಾ, ಮಾಹಿಮ್, ಘಾಟ್‌ಕೋಪರ್, ಮುಲುಂಡ್ ಮತ್ತು ವಿಖ್ರೋಲಿ ಉಪನಗರಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ದಕ್ಷಿಣ ಮುಂಬೈನ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ.ಥಾಣೆ, ಅಂಬರ್ ನಾಥ್, ಬದ್ಲಾಪುರ್, ಕಲ್ಯಾಣ್ ಮತ್ತು ಉಲ್ಲಾಸ್‌ನಗರದಲ್ಲಿಯೂ ಸಹ ಬಿರುಸಿನ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿದೆ. ಮುಂಬೈನ ಅಲಲ್ಲಿ ಮುಂದಿನ 3-4 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿರುಗಾಳಿ ಹಾಗೂ ಹವಾಮಾನ ವೈಫರೀತ್ಯದಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ15 ವಿಮಾನಗಳ ಮಾರ್ಗವನ್ನು ಬದಲಿಸಲಾಯಿತು. ಸಂಜೆ 5-30 ರಿಂದ ಮತ್ತೆ ವಿಮಾನ ಹಾರಾಟ ಆರಂಭವಾಗಿದೆ ಎಂದು ಖಾಸಗಿ ಏರ್ ಪೋರ್ಟ್ ನಿರ್ವಾಹಕರೊಬ್ಬರು ಹೇಳಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 66 ನಿಮಿಷಗಳ ಕಾಲ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದು ವಿಮಾನ ನಿಲ್ದಾಣ ನಿರ್ವಾಹಕರು ಮಾಹಿತಿ ನೀಡಿದ್ದಾರೆ.

ಭಾರಿ ಮಳೆ, ಗಾಳಿಗೆ ತಂತಿಯ ಮೇಲೆ ಬ್ಯಾನರ್ ಬಿದ್ದ ನಂತರ ಆರೆ ಮತ್ತು ಅಂಧೇರಿ ಪೂರ್ವ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೆಟ್ರೋ ರೈಲಿನ ವಕ್ತಾರರು ತಿಳಿಸಿದ್ದಾರೆ. ಥಾಣೆ ಜಿಲ್ಲೆಯ ಕಲ್ವಾ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತದ ವರದಿಯಾಗಿದೆ. ಇದಲ್ಲದೇ ಕೆಲವೆಡೆ ಮರಗಳು ಉರುಳಿದ ಘಟನೆಯೂ ವರದಿಯಾಗಿದೆ.

ಮೂವರು ಮೃತ್ಯು, 59 ಮಂದಿಗೆ ಗಾಯ:

ಬಿರುಗಾಳಿ, ಮಳೆಗೆ ಕಬ್ಬಿಣದ ಹೋರ್ಡಿಂಗ್ ವೊಂದು ಪೆಟ್ರೋಲ್ ಪಂಪ್ ಮೇಲೆ ಕುಸಿದು ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದು, 59 ಜನರು ಗಾಯಗೊಂಡಿರುವ ಘಟನೆ ವಾಣಿಜ್ಯ ನಗರಿಯ ಘಾಟ್ಕೋಪರ್ ಪ್ರದೇಶದಲ್ಲಿ ಸೋಮವಾರ ನಡೆದಿದೆ.

Latest Indian news

Popular Stories