ನೇಜಾರು ಕೊಲೆ ಪ್ರಕರಣ: ಆರೋಪಿ ವೀಡಿಯೋ ಕಾನ್ಫರೆನ್ಸ್’ನಲ್ಲಿ ನ್ಯಾಯಾಲಯಕ್ಕೆ ಹಾಜರು – ಸಾಕ್ಷಿ ವಿಚಾರಣೆ ವಿಳಂಬ!

ಉಡುಪಿ: ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ತರಬೇತಿಗೆ ತೆರಳಿರುವುದರಿಂದ ಜೂನ್ 13 ರಿಂದ ಮೂರು ದಿನಗಳ ಕಾಲ ನಡೆಯಬೇಕಾಗಿದ್ದ ಸಾಕ್ಷಿಗಳ ವಿಚಾರಣೆಯು ಇಂದು ನಡೆದಿಲ್ಲ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ಜೂನ್ 13 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಈ ವೇಳೆ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಹಾಜರಿದ್ದರು.

ಎ.10ರಂದು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ, ಜೂ.13ರಂದು ಪ್ರಕರಣದ ದೂರುದಾರರು, ಜೂ.14 ಮತ್ತು 15ರಂದು ತಲಾ ಇಬ್ಬರು ಸೇರಿದಂತೆ ಒಟ್ಟು ಐದು ಸಾಕ್ಷಿಗಳ ವಿಚಾರಣೆ ದಿನಾಂಕ ನಿಗದಿ ಪಡಿಸಿ ಆದೇಶ ನೀಡಿದ್ದರು. ಆದರೆ ಈಗಾಗಲೇ ವರ್ಗಾವಣೆಗೊಂಡಿರುವ ನ್ಯಾಯಾಧೀಶ ದಿನೇಶ್ ಹೆಗ್ಡೆ ಈ ಮಧ್ಯೆ ತರಬೇತಿಗೆ ತೆರಳಿರುವುದರಿಂದ ಈ ಮೂರು ದಿನ ಕೂಡ ವಿಚಾರಣೆ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಆದುದರಿಂದ ಈ ಪ್ರಕರಣಕ್ಕೆ ಸಂಬಂಧಿಸಿ ಮೊದಲ ದಿನ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಕೋರ್ಟ್ ಕಲಾಪ ನಡೆಸಿದರು. ಇದೇ ರೀತಿ ಇವರು ಮೂರು ದಿನಗಳ ಕಾಲ ಕಲಾಪ ನಡೆಸಲಿದ್ದು, ಕೊನೆಯ ದಿನ ಜೂ.15ರಂದು ಮುಂದಿನ ದಿನಾಂಕ ನಿಗದಿ ಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ, ಈಗಾಗಲೇ ವರ್ಗಾವಣೆಯಾಗಿರುವುದರಿಂದ ಮತ್ತು ಇವರ ವರ್ಗಾವಣೆ ಯಿಂದ ಖಾಲಿಯಾಗಿರುವ ಸ್ಥಾನಕ್ಕೆ ಈವರೆಗೆ ನ್ಯಾಯಾಧೀಶರ ನೇಮಕ ಆಗದೆ ಇರುವುದರಿಂದ ಈ ಪ್ರಕರಣದ ವಿಚಾರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ

Latest Indian news

Popular Stories