ನವದೆಹಲಿ: ಬಿಜೆಪಿ ಪ್ರಧಾನ ಕಛೇರಿಯತ್ತ ಮೆರವಣಿಗೆ, ಎಎಪಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು, ಸೆಕ್ಷನ್ 144 ಜಾರಿ

ನವದೆಹಲಿ: ‘ಜೈಲ್ ಭರೋ’ ಪ್ರತಿಭಟನೆ ಭಾಗವಾಗಿ ರಾಷ್ಟ್ರ ರಾಜಧಾನಿಯ ಬಿಜೆಪಿ ಪ್ರಧಾನ ಕಚೇರಿಯತ್ತ ಮೆರವಣಿಗೆ ನಡೆಸುತ್ತಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಹಲವು ಕಾರ್ಯಕರ್ತರನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಈ ಮೆರವಣಿಗೆ ನಡೆಯುತಿತ್ತು.

ಡಿಡಿಯು ಮಾರ್ಗದಲ್ಲಿರುವ ಎಎಪಿ ಕೇಂದ್ರ ಕಚೇರಿಯ ಹೊರಗೆ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು, ಘೋಷಣೆಗಳನ್ನು ಕೂಗಿ ಕೇಂದ್ರದಲ್ಲಿ ಬಿಜೆಪಿ ಆಡಳಿತದ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.

ಪ್ರತಿಭಟನಾ ಮೆರವಣಿಗೆಗೆ ಮುನ್ನ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮುಂದೆ ದೊಡ್ಡ ಸವಾಲುಗಳು ಎದುರಾಗಲಿವೆ ಮತ್ತು ಅವುಗಳನ್ನು ಎದುರಿಸಲು ಕಾರ್ಯಕರ್ತರನ್ನು ಸಜ್ಜುಗೊಳಿಸಲು ಮನವಿ ಮಾಡಿಕೊಂಡರು. ನಿಮ್ಮಗೆ ಧೈರ್ಯವಿದ್ದರೆ ಯಾರನ್ನೂ ಬೇಕಾದರೂ ಜೈಲಿಗೆ ಕಳುಹಿಸಿ ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಸವಾಲು ಹಾಕಿದರು.

“ಪ್ರಧಾನಿ ನರೇಂದ್ರ ಮೋದಿಯವರು ಎಎಪಿಯ ಉದಯದ ಬಗ್ಗೆ ಚಿಂತಿತರಾಗಿದ್ದಾರೆ, ಪಕ್ಷವು ತುಂಬಾ ವೇಗವಾಗಿ ಬೆಳೆಯುತ್ತಿದೆ. ಪಕ್ಷವನ್ನು ಹತ್ತಿಕ್ಕಲು ‘ಆಪರೇಷನ್ ಜಾಡು’ ಆರಂಭಿಸಿದ್ದಾರೆ, ಮುಂದಿನ ದಿನಗಳಲ್ಲಿ ನಮ್ಮ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು, ನಮ್ಮ ಕಚೇರಿಯ ರಸ್ತೆಯನ್ನು ಸಹ ಕಿತ್ತುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಸಿಎಂ ಕೇಜ್ರಿವಾಲ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಬಿಜೆಪಿ ಕೇಂದ್ರ ಕಚೇರಿಯತ್ತ ಮೆರವಣಿಗೆ ನಡೆಸಿದ ಎಎಪಿ ನಾಯಕರು, ಪೊಲೀಸರು ಹಾಕಿದ್ದ 10 ಅಡಿ ಎತ್ತರದ ಬ್ಯಾರಿಕೇಡ್‌ಗಳ ಮುಂದೆ ಕುಳಿತರು. ಪಕ್ಷದ ಮುಖಂಡರು ಸುಮಾರು 20 ನಿಮಿಷಗಳ ಕಾಲ ಬ್ಯಾರಿಕೇಡ್‌ಗಳ ಮುಂದೆ ಕುಳಿತು ಧರಣಿಯನ್ನು ಅಂತ್ಯಗೊಳಿಸಿದರು.

ಸಂಜಯ್ ಸಿಂಗ್ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಕೇಜ್ರಿವಾಲ್ ಮತ್ತೆ ತಮ್ಮ ಪಕ್ಷದ ಕಚೇರಿಗೆ ತೆರಳಿದರು. ದೆಹಲಿ ಪೊಲೀಸರು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ, ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಅರೆಸೈನಿಕ ಪಡೆ ಸಿಬ್ಬಂದಿಯೊಂದಿಗೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿದ್ದಾರೆ. ಪೊಲೀಸರು ಬಿಜೆಪಿ ಪ್ರಧಾನ ಕಚೇರಿಯ ಬಳಿ ಸಿಆರ್‌ಪಿಸಿಯ ಸೆಕ್ಷನ್ 144 ಜಾರಿಗೆ ತಂದಿದ್ದು, ಪ್ರತಿಭಟನೆಗೆ ಎಎಪಿ ಅನುಮತಿ ಪಡೆದಿಲ್ಲ ಎಂದು ಹೇಳಿದರು.

144 ಸೆಕ್ಷನ್ ಜಾರಿಯಾಗಿರುವುದರಿಂದ ಪ್ರತಿಭಟನಾಕಾರರನ್ನು ತಡೆದು ನಿಲ್ಲಿಸಿದ್ದೇವೆ. ಸಾಕಷ್ಟು ಪೊಲೀಸ್ ವ್ಯವಸ್ಥೆಗಳು ಜಾರಿಯಲ್ಲಿವೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಎಂ ಹರ್ಷವರ್ಧನ್ ಹೇಳಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ಹೆಚ್ಚಿಸಿದ್ದೇವೆ ಮತ್ತು ಸಾಕಷ್ಟು ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ರಸ್ತೆಯನ್ನು ಎರಡೂ ಬದಿಗಳಿಂದ ಬ್ಯಾರಿಕೇಡ್ ಹಾಕಲಾಗಿದೆ ಎಂದು ಅಧಿಕಾರಿ ಹೇಳಿದರು. ಅದೇ ರೀತಿ, ದೆಹಲಿ ಟ್ರಾಫಿಕ್ ಪೊಲೀಸರು ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ತೆರಳದಂತೆ ಪ್ರಯಾಣಿಕರಿಗೆ ಸೂಚಿಸಿದ್ದಾರೆ.

Latest Indian news

Popular Stories