ತುರ್ತಾಗಿ ಬಿಜೆಪಿ ಸೇರುವ ಚಿಂತನೆಯಿಲ್ಲ; ರಾಯಣ್ಣ ಬ್ರಿಗೇಡ್ ಆರಂಭಿಸುವ ಆಲೋಚನೆ ಇದೆ: ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ನಾನು ಈಗಲೂ ಬಿಜೆಪಿಯಲ್ಲಿಯೇ ಇದ್ದೇನೆ. ಆದರೆ ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ, ರಾಯಣ್ಣ ಬ್ರಿಗೇಡ್ ಆರಂಭಿಸುವ ಆಲೋಚನೆ ಇದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪ ಮಕ್ಕಳ ಕೈಯಲ್ಲಿ ಬಿಜೆಪಿ ಇರುವುದು ತಪ್ಪು. ಹಿಂದೂ ಹೋರಾಟಗಾರರಿಗೆ ಮತ್ತು ಹಿಂದುತ್ವಕ್ಕೆ ನ್ಯಾಯ ಸಿಗಲಿ ಎಂದು ಚುನಾವಣೆಗೆ ಸ್ಪರ್ಧೆ ಮಾಡಿದ್ದೆ ಎಂದು ಅವರು ಹೇಳಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಸಿಕ್ಕಿ ಬಿದ್ದಿದ್ದಾರೆ. ಮನೆಯಲ್ಲಿದ್ದ ಹೆಣ್ಣು ಮಕ್ಕಳನ್ನು ಬೀದಿಗೆ ತಂದಿದ್ದಾರೆ. ಈ ಹಗರಣದಲ್ಲಿ ಅವರ ಕುಟುಂಬದವರು ಭಾಗಿಯಾಗಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಅಲ್ಲದೇ ಸಿಎಂ ತಕ್ಷಣ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನೇರವಾಗಿ ಹಿಂದೂ ಸಮಾಜ ಟೀಕೆ ಮಾಡುವ ಧೈರ್ಯವನ್ನು ಇದುವರೆಗೂ ಯಾರು ಮಾಡಿರಲಿಲ್ಲ. ಈಗ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಹಿಂದೂ ಧರ್ಮದ ಬಗ್ಗೆ ಟೀಕೆ ಮಾಡ್ತಿದ್ದಾರೆ. ಹಿಂದೂಗಳಿಗೆ ಅವರು ನೋವುಂಟು ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಗೌರವ ಬರುವ ರೀತಿ ಅವರು ನಡೆದುಕೊಳ್ಳಲಿ. ಇಲ್ಲದಿದ್ದರೆ ಇಡೀ ಹಿಂದೂ ಸಮಾಜ ಅವರ ವಿರುದ್ಧ ತಿರುಗಿ ಬೀಳಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ವಾಲ್ಮೀಕಿ ನಿಗಮದ ಹಗರಣದ ಇಡೀ ದೇಶದ ಗಮನ ಸೆಳೆದಿದೆ. ಇಷ್ಟಾದರೂ ನಿಗಮದ ಅಧ್ಯಕ್ಷ ರಾಜೀನಾಮೆ ನೀಡಿಲ್ಲ. ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸವರಾಜ್ ದದ್ದಲ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Latest Indian news

Popular Stories