ಇನ್ನೂ ಪ್ರಧಾನಿ ಆಗಿಲ್ಲ, ಆಗಲೇ ಸೊಕ್ಕು ಜಾಸ್ತಿ ಆಗಿದೆ: ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ನವದೆಹಲಿ: ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣದಿಂದ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ದೆಹಲಿಗೆ ಬಂದ ಅಮಿತ್ ಶಾ ಅವರ ಸಾರ್ವಜನಿಕ ಸಭೆಯಲ್ಲಿ 500 ಕ್ಕಿಂತ ಕಡಿಮೆ ಜನ ಇದ್ದರು. ದೆಹಲಿಗೆ ಬಂದ ನಂತರ ಅವರು ದೇಶದ ಜನರನ್ನು ನಿಂದಿಸಲು ಪ್ರಾರಂಭಿಸಿದರು ಮತ್ತು ಆಮ್ ಆದ್ಮಿ ಪಕ್ಷದ ಬೆಂಬಲಿಗರು ಪಾಕಿಸ್ತಾನಿ ಎಂದು ಕರೆದಿರುವುದಾಗಿ ಹೇಳಿದರು.

ದೆಹಲಿಯ ಜನರು ನಮಗೆ 62 ಸ್ಥಾನಗಳನ್ನು ನೀಡಿ, ಶೇ. 56 ರಷ್ಟು ಮತಗಳನ್ನು ನೀಡಿ ನಮ್ಮ ಸರ್ಕಾರವನ್ನು ರಚಿಸಿದ್ದಾರೆ. ದೆಹಲಿಯ ಜನರು ಪಾಕಿಸ್ತಾನಿಗಳೇ? 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಪಂಜಾಬ್‌ನ ಜನರು ನಮಗೆ ನೀಡಿದ್ದಾರೆ, ಅವರು ಪಾಕಿಸ್ತಾನಿಗಳೇ? ಗುಜರಾತ್, ಗೋವಾ, ಉತ್ತರ ಪ್ರದೇಶ, ಅಸ್ಸಾಂ, ಮಧ್ಯಪ್ರದೇಶ ಮತ್ತು ದೇಶದ ಅನೇಕ ಭಾಗಗಳ ಜನರು ನಮಗೆ ಪ್ರೀತಿ ಮತ್ತು ವಿಶ್ವಾಸವ ನೀಡಿದ್ದಾರೆ, ಈ ದೇಶದ ಜನರೆಲ್ಲರೂ ಪಾಕಿಸ್ತಾನಿಗಳೇ? ಎಂದು ಅಮಿತ್ ಶಾ ಅವರನ್ನು ಕೇಳಲು ಬಯಸುತ್ತೇನೆ ಎಂದರು.

ಪ್ರಧಾನಿ ಮೋದಿ ನಿಮ್ಮನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಇದರಿಂದ ನಿಮ್ಮಗೆ ಹೆಮ್ಮೆ ಹೆಚ್ಚಾಗಿದ್ದು, ಜನರನ್ನು ನಿಂದಿಸಲು ಮತ್ತು ಬೆದರಿಕೆ ಹಾಕಲು ಪ್ರಾರಂಭಿಸಿದ್ದೀರಿ. ನೀವು ಇನ್ನೂ ಪ್ರಧಾನಿಯಾಗಿಲ್ಲ. ಆದರೆ ಆಗಲೇ ಸೊಕ್ಕು ಜಾಸ್ತಿ ಆಗಿದೆ. ನೀವು ಪ್ರಧಾನಿ ಆಗುತ್ತಿಲ್ಲ ಎಂದು ನಿಮಗೆ ಹೇಳುತ್ತೇನೆ. ಏಕೆಂದರೆ ಜೂನ್ 4 ರಂದು ಬಿಜೆಪಿ ಸರ್ಕಾರವನ್ನು ರಚಿಸುತ್ತಿಲ್ಲ ಎಂದು ಹೇಳಿದರು.

Latest Indian news

Popular Stories