ಕೋಲ್ಕತ್ತಾ: ವಿದ್ಯಾರ್ಥಿಗಳ ಆಂದೋಲನ ಮುಂದುವರಿದಿರುವ ಬಾಂಗ್ಲಾದೇಶದಿಂದ ಮುಂದಿನ ದಿನಗಳಲ್ಲಿ ಒಂದು ಕೋಟಿ ಹಿಂದೂ ನಿರಾಶ್ರಿತರು ಪಶ್ಚಿಮ ಬಂಗಾಳ ತಲುಪಲಿದ್ದಾರೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
ವಿಧಾನಸಭೆಯ ವಾರ್ಷಿಕ ಅಧಿವೇಶನದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ, ಪಶ್ಚಿಮ ಬಂಗಾಳದ ಜನರು ಈ ನಿರಾಶ್ರಿತರ ಪ್ರವೇಶಕ್ಕೆ ಸಿದ್ಧರಾಗಿರಬೇಕು ಎಂದು ಹೇಳಿದರು.
“ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಹತ್ಯೆ ಮಾಡಲಾಗುತ್ತಿದೆ. ರಂಗ್‌ಪುರ ನಗರ ಪರಿಷತ್ತಿನ ಕೌನ್ಸಿಲರ್ ಹರದನ್ ನಾಯಕ್ ಕೊಲ್ಲಲ್ಪಟ್ಟರು. ಸಿರಾಜ್‌ಗಂಜ್‌ನಲ್ಲಿ ಹದಿಮೂರು ಪೊಲೀಸರು ಕೊಲ್ಲಲ್ಪಟ್ಟರು. ಅವರಲ್ಲಿ ಒಂಬತ್ತು ಮಂದಿ ಹಿಂದೂಗಳು. ನೊಖಾಲಿಯಲ್ಲಿನ ಹಿಂದೂ ನಿವಾಸಗಳಿಗೆ ಬೆಂಕಿ ಹಚ್ಚಲಾಗಿದೆ” ಎಂದು ಸುವೆಂದು ಹೇಳಿದರು.
ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿ ಮೂರು ದಿನಗಳಲ್ಲಿ ಬದಲಾಗುವುದಿಲ್ಲ, ದೇಶವು ಧಾರ್ಮಿಕ ಮೂಲಭೂತವಾದಿಗಳ ಹಿಡಿತದಲ್ಲಿದೆ.
“ಒಂದು ಕೋಟಿ ಹಿಂದೂ ನಿರಾಶ್ರಿತರಿಗೆ ಆಶ್ರಯ ನೀಡಲು ಮಾನಸಿಕವಾಗಿ ಸಿದ್ಧರಾಗಿರಿ. ಅದಕ್ಕೆ ನಾನು ಸಿದ್ಧ” ಎಂದು ಹೇಳಿದ ಅವರು, 1971ರಲ್ಲಿ ಬಾಂಗ್ಲಾದೇಶದಿಂದ ಬಂದಿರುವ ಹಿಂದೂ ನಿರಾಶ್ರಿತರಿಗೆ ಆಶ್ರಯ ನೀಡುವಂತೆ ಪಶ್ಚಿಮ ಬಂಗಾಳದ ಹಿಂದೂ ಜನರಿಗೆ ಮನವಿ ಮಾಡಿದರು.
ಶೇಖ್ ಹಸೀನಾ ರಾಜೀನಾಮೆಯ ನಂತರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶಾಂತಿ ಕಾಪಾಡುವಂತೆ ಮತ್ತು ಯಾವುದೇ ರೀತಿಯ ವದಂತಿಗಳಿಗೆ ಗಮನ ಕೊಡಬೇಡಿ ಎಂದು ಜನರಿಗೆ ಮನವಿ ಮಾಡಿದ್ದರು. ಬಾಂಗ್ಲಾದೇಶದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ಮಮತಾ ನಿರಾಕರಿಸಿದರು.ಇದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿಷಯವಾಗಿದೆ ಎಂದು ಹೇಳಿದರು.
“ಶಾಂತಿಯನ್ನು ಕಾಪಾಡಲು ಮತ್ತು ಯಾವುದೇ ರೀತಿಯ ಪ್ರಚೋದನೆಯನ್ನು ತಪ್ಪಿಸುವಂತೆ ನಾನು ಪಶ್ಚಿಮ ಬಂಗಾಳದ ಎಲ್ಲಾ ನಾಗರಿಕರಿಗೆ ಮನವಿ ಮಾಡುತ್ತೇನೆ. ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ. ಇದು ಎರಡು ದೇಶಗಳ ನಡುವಿನ ವಿಷಯವಾಗಿದೆ ಮತ್ತು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ” ಎಂದು ಪಿಟಿಐ ಉಲ್ಲೇಖಿಸಿದೆ. ಮಮತಾ ಅವರು ಕೋಲ್ಕತ್ತಾ ಮೈತ್ರಿ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಎಲ್ಲಾ ರೈಲು ಸೇವೆಗಳನ್ನು ರದ್ದುಗೊಳಿಸಿದ್ದಾರೆ.