Featured StoryNational

ಲೋಕಸಭೆಯಲ್ಲಿಂದು ಒಂದು ರಾಷ್ಟ್ರ-ಒಂದು ಚುನಾವಣೆ ವಿಧೇಯಕ ಮಂಡನೆ: ಬಿಜೆಪಿ-ಕಾಂಗ್ರೆಸ್’ನಿಂದ ಸಂಸದರಿಗೆ ವಿಪ್ ಜಾರಿ, ಕಡ್ಡಾಯ ಹಾಜರಾತಿಗೆ ಸೂಚನೆ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ಕಲ್ಪಿಸುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿಧೇಯಕವನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದುಸ ಈ ಹಿನ್ನೆಲೆಯಲ್ಲಿ ಉಭಯ ಸದನದಲ್ಲಿ ಕಡ್ಡಾಯ ಹಾಜರಾತಿಗೆ ತನ್ನ ಸಂಸದರಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ ವಿಪ್ ಜಾರಿ ಮಾಡಿವೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ‘ಒಂದು ರಾಷ್ಟ್ರ, ಒಂದೇ ಚುನಾವಣೆ’ಗೆ ಸಂಬಂಧಿತ ಎರಡು ಪ್ರತ್ಯೇಕ ಮಸೂದೆಗಳನ್ನು ಇಂದು (ಮಂಗಳವಾರ) ಲೋಕಸಭೆಯಲ್ಲಿ ಮಂಡಿಸಲಿದೆ. ಲೋಕಸಭೆ ಕಲಾಪ ಕಾರ್ಯಸೂಚಿಯಲ್ಲಿ ಈ ಅಂಶ ಸೇರ್ಪಡೆಗೊಂಡಿದೆ. ಕೇಂದ್ರ ಕಾನೂನು ಸಚಿವ ಅರುಣ್‌ ರಾಮ್‌ ಮೇಘವಾಲ್ ಅವರು ‘ಸಂವಿಧಾನ (129ನೇ ತಿದ್ದುಪಡಿ) ಮಸೂದೆ ಹಾಗೂ ‘ಕೇಂದ್ರ ಪ್ರಾಂತ್ಯವಾರು ಕಾಯ್ದೆಗಳು (ತಿದ್ದುಪಡಿ)’ ಮಸೂದೆ ಮಂಡಿಸಲಿದ್ದಾರೆ.

ಮೇಘವಾಲ್ ಅವರು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿದ ನಂತರ ಹೆಚ್ಚಿನ ಸಮಾಲೋಚನೆ ನಡೆಸುವಂತೆ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಸೂಚಿಸುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಂಸದರ ಕಡ್ಡಾಯ ಹಾಜರಾತಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ ವಿಪ್ ಜಾರಿ ಮಾಡಿವೆ.

ಕೇಂದ್ರ ಸಚಿವ ಸಂಪುಟವು ಈ ತಿಂಗಳ ಆರಂಭದಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ವಿಧೇಯಕ ಮಂಡನೆ ಮಾಡಲು ಅನುಮೋದನೆ ನೀಡಿತ್ತು.

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮಸೂದೆಯನ್ನು ಬೆಂಬಲಿಸುತ್ತಿದ್ದರೆ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ವಿಧೇಯಕವನ್ನು ವಿರೋಧಿಸುತ್ತಿವೆ.

ಕೇಂದ್ರ ಸಚಿವ ಸಂಪುಟವು ಸೆಪ್ಟೆಂಬರ್‌ನಲ್ಲಿ ಏಕಕಾಲಿಕ ಚುನಾವಣೆಯ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿತ್ತು. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರ ನೇತೃತ್ವದ ಸಮಿತಿ ಕೂಲಂಕಷ ಅಧ್ಯಯನ ನಡೆಸಿ ಈ ಬಗ್ಗೆ ವರದಿಯನ್ನು ನೀಡಿತ್ತು.

ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ತನ್ನ ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಿದೆ. ಎರಡು ಹಂತಗಳಲ್ಲಿ ಏಕಕಾಲಕ್ಕೆ ಚುನಾವಣೆಯನ್ನು ಜಾರಿಗೆ ತರಲು ಸಲಹೆ ನೀಡಲಾಗಿದೆ. ಮೊದಲ ಹಂತದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಮತ್ತು ಸಾರ್ವತ್ರಿಕ ಚುನಾವಣೆಯ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು (ಪಂಚಾಯತ್ ಮತ್ತು ಪುರಸಭೆಗಳು) ನಡೆಸುವಂತೆ ಶಿಫಾರಸು ಮಾಡಲಾಗಿದೆ.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button