8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ – ರಾಜ್ಯ ಸರಕಾರದಿಂದ ವಿನೂತನ ಪ್ರಯೋಗಕ್ಕೆ ಸಿದ್ದತೆ  

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷ (2024 25)ದಲ್ಲಿ 8ರಿಂದ 10ನೇ ತರಗತಿ ಮಕ್ಕಳಿಗೆ ತೆರೆದ ಪುಸ್ತಕ (ಓಪನ್‌ ಬುಕ್‌) ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತೀರ್ಮಾನಿಸಿದೆ. ಈ ಬಗೆಗಿನ ಪ್ರಸ್ತಾವವನ್ನು ಇಲಾಖೆಯು ತನ್ನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಉಲ್ಲೇಖಿಸಿದೆ. ಈ ವರ್ಷದಿಂದ ಸಿಬಿಎಸ್‌ಇ (ಕೇಂದ್ರಿಯ ಪಠ್ಯಕ್ರಮ) ಶಾಲೆಗಳಲ್ಲಿ 9ರಿಂದ 12ನೇ ತರಗತಿಯ ತನಕ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆ ನಡೆಸುವ ಪ್ರಸ್ತಾವನೆ ಚರ್ಚೆಯಲ್ಲಿದೆ.

ವಿಷಯವಾರು 25 ಅಂಕಗಳಿಗೆ ಪ್ರಶ್ನೆ ಪತ್ರಿಕೆ ತಯಾರಿಸಿ, ಸಮಯ ನಿಗದಿಪಡಿಸಿ ವಿದ್ಯಾರ್ಥಿಗಳಿಗೆ ಪುಸ್ತಕ ನೋಡಿ ಉತ್ತರಿಸಲು ಅವಕಾಶ ನೀಡಬೇಕು ಎಂದು ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಹೈಸ್ಕೂಲ್‌ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಓಪನ್‌ ಬುಕ್‌ ಎಕ್ಸಾಂ ಇದ್ದಾಗ ವಿದ್ಯಾರ್ಥಿಗಳು ಪುಸ್ತಕ ಓದುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಪಠ್ಯ, ನೋಟ್‌ ಬುಕ್‌ ಮತ್ತು ಸಂಬಂಧಿತ ರೆಫ‌ರೆನ್ಸ್‌ ಬುಕ್‌ಗಳಲ್ಲಿ ಯಾವ ವಿಷಯ ಎಲ್ಲಿದೆ ಅದರ ಬಳಕೆ ಹೇಗೆ ಎಂಬ ಸ್ಪಷ್ಟ ಅರಿವು ಅವರಿಗೆ ಇರಬೇಕಾಗುತ್ತದೆ. ಆದ್ದರಿಂದ ಮಕ್ಕಳಲ್ಲಿ ಪಠ್ಯ ಓದುವ ಮನೋಭಾವವನ್ನು ಹೆಚ್ಚಿಸಲು ತೆರೆದ ಪುಸ್ತಕ ಪರೀಕ್ಷೆ ವ್ಯವಸ್ಥೆಯನ್ನು ಪರಿಚಯಿಸಿದ್ದೇವೆ ಎಂದು ಶಿಕ್ಷಣ ಇಲಾಖೆಯ ಪ್ರೌಢ ಶಿಕ್ಷಣ ವಿಭಾಗದ ನಿರ್ದೇಶಕ ಕೃಷ್ಣಾಜಿ ಎಸ್‌.ಕರಿಚಣ್ಣವರ ಹೇಳುತ್ತಾರೆ.

ತೆರೆದ ಪುಸ್ತಕ ಪರೀಕ್ಷೆ ಪರಿಕಲ್ಪನೆ ಪರಿಚಯಿಸುತ್ತಿದ್ದರೂ ಇದನ್ನು ಎಸೆಸೆಲ್ಸಿ ಪರೀಕ್ಷೆ, ಸಂಕಲನಾತ್ಮಕ ಮೌಲ್ಯಾಂಕನ ಅಥವಾ ರೂಪಣಾತ್ಮಕ ಮೌಲ್ಯಾಂಕನ ಮುಂತಾದ ಮುಖ್ಯ ಪರೀಕ್ಷೆಯ ಭಾಗವನ್ನಾಗಿಸಿಲ್ಲ. ಈ ಪರೀಕ್ಷೆ ಪದ್ಧತಿಯು ಶೈಕ್ಷಣಿಕ ಚಟುವಟಿಕೆಯ ಒಂದು ಭಾಗವಾಗಿ ಸದ್ಯಕ್ಕೆ ಜಾರಿಯಲ್ಲಿರಲಿದೆ.
ಪುಸ್ತಕ ಓದಿ ಪರೀಕ್ಷೆ ಬರೆಯುವುದು ಸುಲಭ ಎಂದು ವಿದ್ಯಾರ್ಥಿಗಳು ಭಾವಿಸಿದರೂ ವಿದ್ಯಾರ್ಥಿಗಳಿಗೆ ಕೇಳಿದ ಪ್ರಶ್ನೆಗೆ ತಮ್ಮ ಬಳಿಯಿರುವ ಪುಸ್ತಕದಲ್ಲಿ ಉತ್ತರ ಎಲ್ಲಿದೆ ಎಂಬ ಖಚಿತ ಅರಿವಿನ ಜತೆಗೆ, ಅದನ್ನು ಅನ್ವಯಿಸುವ ರೀತಿಯ ತಿಳಿವಳಿಕೆ ಇರಬೇಕು. ಇಲ್ಲದೆ ಹೋದಲ್ಲಿ ಸಮಯ ವ್ಯರ್ಥವಾಗುವುದಲ್ಲದೆ, ನಿಗದಿತ ಅವಧಿಯಲ್ಲಿ ಉತ್ತರ ಬರೆಯುವುದು ಕಷ್ಟವಾಗಲಿದೆ. ಆದ್ದರಿಂದ ತೆರೆದ ಪುಸ್ತಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ತಮ್ಮ ಬಳಿಯಿರುವ ಪುಸ್ತಕವನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡಿರಬೇಕಾಗುತ್ತದೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ಓಪನ್‌ ಬುಕ್‌ ಎಕ್ಸಾಂನ ಯಶಸ್ಸನ್ನು ಗಮನಿಸಿ ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಈ ಪರೀಕ್ಷೆಯ ಅಂಕಗಳನ್ನು ಅಂತರಿಕ ಅಂಕಗಳಿಗೆ ಪರಿಗಣಿಸುವ ಚಿಂತನೆಯೂ ಶಿಕ್ಷಣ ಇಲಾಖೆಯಲ್ಲಿದೆ.

ದೈನಂದಿನ ಪಾಠದ ನಿರೀಕ್ಷೆಯಲ್ಲಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಅನಿರೀಕ್ಷಿತವಾಗಿ ಕಿರು ಪರೀಕ್ಷೆಯನ್ನು ನಡೆಸುವಂತೆಯೂ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ವಿಷಯದ ಬೋಧನಾ ಅವಧಿಗೆ ಸೀಮಿತಗೊಳಿಸಿ ಪ್ರಶ್ನೆಗಳನ್ನು ನೀಡಿ ತಮ್ಮ ನೋಟ್‌ ಬುಕ್‌ಗಳಲ್ಲೇ ಉತ್ತರ ಬರೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಬೇಕು ಎಂದು ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಹೇಳಲಾಗಿದೆ.

ಸದ್ಯ ರೂಢಿಯಲ್ಲಿರುವ ಪರೀಕ್ಷಾ ಕ್ರಮದಲ್ಲಿ ವಿದ್ಯಾರ್ಥಿಗಳು ಉತ್ತರಗಳನ್ನು ನೆನಪಿಟ್ಟುಕೊಂಡು ಬರೆಯಬೇಕಾಗುತ್ತದೆ.ಓಪನ್‌ ಬುಕ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪಠ್ಯಪುಸ್ತಕ, ನೋಟ್‌ ಬುಕ್‌ ಮತ್ತು ಇನ್ನಿತರ ರೆಫ‌ರೆನ್ಸ್‌ ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ.ಪುಸ್ತಕಗಳನ್ನು ಮುಂಚಿತವಾಗಿಯೇ ಓದಿಕೊಂಡಿದ್ದರೆ ಮಾತ್ರ ಬರೆಯಲು ಸಾಧ್ಯ.ಸದ್ಯ ಎಲ್ಲ ವಿಷಯಗಳಲ್ಲಿ 25 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ. ಫ‌ಲಿತಾಂಶ ನೋಡಿ ಮುಂದಿನ ನಿರ್ಣಯ.

Latest Indian news

Popular Stories