Paralympics 2024: ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸುಮಿತ್ ಆಂಟಿಲ್

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲುವಲ್ಲಿ ಸುಮಿತ್ ಆಂಟಿಲ್ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟಿದ್ದ ಸುಮಿತ್ ಈ ಬಾರಿ ದಾಖಲೆಯೊಂದಿಗೆ ಬಂಗಾರದ ಪದಕಕ್ಕೆ ಕೊರೊಳೊಡ್ಡಿದ್ದಾರೆ.

ಜಾವೆಲಿನ್ ಥ್ರೋ F64 ಫೈನಲ್ ಸ್ಪರ್ಧೆಯಲ್ಲಿ 70.59 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಭಾರತೀಯ ತಾರೆ ಚಿನ್ನದ ಪದಕ ಗೆದ್ದರೆ, 67.03 ಮೀಟರ್ ದೂರ ಎಸೆದ ಶ್ರೀಲಂಕಾದ ದುಲಾನ್ ಬೆಳ್ಳಿ ಪದಕ ಗೆದ್ದರು. ಇನ್ನು ಆಸ್ಟ್ರೇಲಿಯಾದ ಬುರಿಯಾನ್ 64.89 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ಸುಮಿತ್ ಆಂಟಿಲ್ ತನ್ನ ಮೊದಲ ಪ್ರಯತ್ನದಲ್ಲಿಯೇ ಪ್ಯಾರಾಲಿಂಪಿಕ್ಸ್​​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಮೊದಲ ಎಸೆತದಲ್ಲೇ 69.11 ಮೀಟರ್‌ ದೂರ ಕ್ರಮಿಸಿದ ಸುಮಿತ್, ಎರಡನೇ ಪ್ರಯತ್ನದ ಮೂಲಕ 70.59 ಮೀಟರ್ ತಲುಪಿ ಚಿನ್ನವನ್ನು ಖಚಿತಪಡಿಸಿಕೊಂಡರು. ಇನ್ನು ಮೂರನೇ ಪ್ರಯತ್ನದಲ್ಲಿ 66.66 ಮೀಟರ್ ದೂರವನ್ನು ಸಾಧಿಸಿದರು. ನಾಲ್ಕನೇ ಪ್ರಯತ್ನದಲ್ಲಿ ಫೌಲ್ ಥ್ರೋ ಮಾಡಿದರು. ಐದನೇ ಪ್ರಯತ್ನದಲ್ಲಿ 69.04 ಮೀಟರ್ ದೂರವನ್ನು ಸಾಧಿಸಿದರು. ಹಾಗೆಯೇ ಕೊನೆಯ ಪ್ರಯತ್ನದಲ್ಲಿ 66.57 ಮೀಟರ್‌ ದೂರಕ್ಕೆ ಎಸೆಯುವ ಮೂಲಕ ಫೈನಲ್ ಸ್ಪರ್ಧೆಯನ್ನು ಮುಗಿಸಿದರು.

ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಮಿತ್ ಆಂಟಿಲ್ ಚಿನ್ನದ ಪದಕವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ವರ್ಷ ನಡೆದ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 69.50 ಮೀಟರ್ ಜಾವೆಲಿನ್ ಎಸೆದು ಚಿನ್ನ ಗೆದ್ದಿದ್ದರು. ಹಾಗೆಯೇ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು 68.55 ಮೀಟರ್‌ ದೂರ ಎಸೆದು ಚಿನ್ನದ ಪದಕವನ್ನು ಗೆದ್ದಿದ್ದರು. ಇದೀಗ ಈ ದಾಖಲೆಗಳನ್ನು ಮುರಿಯುವ ಮೂಲಕ 70.59 ಮೀಟರ್​ನೊಂದಿಗೆ ಸುಮಿತ್ ಆಂಟಿಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Latest Indian news

Popular Stories