ಸರ್ವಾಧಿಕಾರದ ವಿರುದ್ಧ ಜನರು ಹೋರಾಡಬೇಕು: ಮನೀಶ್ ಸಿಸೋಡಿಯಾ

ನವದೆಹಲಿ: ದೇಶದಲ್ಲಿನ ಸರ್ವಾಧಿಕಾರತ್ವ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ಎಎಪಿ ಕಾರ್ಯಕರ್ತರು ಹಾಗೂ ಜನತೆಗೆ ಹಿರಿಯ ಎಎಪಿ ನಾಯಕ ಮನೀಶ್ ಸಿಸೋಡಿಯಾ ಶನಿವಾರ ಕರೆ ನೀಡಿದ್ದಾರೆ.

ದೆಹಲಿ ಮಧ್ಯ ನೀತಿ ಪ್ರಕರಣದಲ್ಲಿ ನಿನ್ನೆಯಷ್ಟೇ ಜೈಲಿನಿಂದ ಹೊರಬಂದ ಬಳಿಕ ಇಂದು ಪಕ್ಷದ ಪ್ರಧಾನ ಕಚೇರಿಯಲ್ಲಿಂದು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಬಿಜೆಪಿಯನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದರು.

ಸಂವಿಧಾನಕ್ಕಿಂತ ಇವರು ಶಕ್ತಿಶಾಲಿಗಳಲ್ಲ. ಸರ್ವಾಧಿಕಾರದ ವಿರುದ್ಧ ಪ್ರತಿಯೊಬ್ಬರು ಹೋರಾಟ ನಡೆಸಬೇಕಾಗಿದೆ. ಅವರು ನಾಯಕರನ್ನು ಮಾತ್ರ ಜೈಲಿನಲ್ಲಿ ಇಡುತ್ತಿಲ್ಲ. ನಾಗರಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಜೈಲಿನಲ್ಲಿದ್ದಾಗ ಜಾಮೀನು ಪಡೆಯುವ ಬಗ್ಗೆ ಚಿಂತಿಸಿರಲಿಲ್ಲ ಆದರೆ ಬಿಜೆಪಿಗೆ ಹಣ ನೀಡದ ಕಾರಣಕ್ಕೆ ಉದ್ಯಮಿಗಳನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಿ ಜೈಲಿಗೆ ಹಾಕುತ್ತಿರುವುದನ್ನು ನೋಡಿ ನೋವಾಗಿದೆ ಎಂದರು.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸಿಸೋಡಿಯಾಗೆ ಶುಕ್ರವಾರ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ವಿಚಾರಣೆಯಿಲ್ಲದೆ 17 ತಿಂಗಳ ಸುದೀರ್ಘ ಸೆರೆವಾಸವು ತ್ವರಿತ ನ್ಯಾಯದ ಹಕ್ಕನ್ನು ವಂಚಿತಗೊಳಿಸಿದೆ ಎಂದು ಹೇಳಿತ್ತು.

ಈ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ , ದೇಶದ ಪ್ರಾಮಾಣಿಕತೆಯ ಪ್ರತೀಕ ಎಂದ ಸಿಸೋಡಿಯಾ, ಕೇಜ್ರಿವಾಲ್ ಅವರ ಕೆಲಸವನ್ನು ದೂಷಿಸಲು ಷಡ್ಯಂತ್ರಗಳನ್ನು ರೂಪಿಸಲಾಗುತ್ತಿದೆ. “ಸರ್ವಾಧಿಕಾರ” ವಿರುದ್ಧ ವಿರೋಧ ಪಕ್ಷದ ನಾಯಕರು ಒಂದಾದರೆ, ಕೇಜ್ರಿವಾಲ್ 24 ಗಂಟೆಗಳಲ್ಲಿ ಜೈಲಿನಿಂದ ಹೊರಬರುತ್ತಾರೆ ಎಂದು ಹೇಳಿದರು.

Latest Indian news

Popular Stories