ಕೇಜ್ರಿವಾಲ್ ಜೈಲಿನಲ್ಲಿ ಕಚೇರಿ ಸ್ಥಾಪಿಸಲು ಅನುಮತಿ ಕೋರಿ ಕೋರ್ಟ್ ಗೆ ಅರ್ಜಿ: ಪಂಜಾಬ್ ಸಿಎಂ ಮಾನ್

ಚಂಡೀಗಢ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿದರೆ, ಅಲ್ಲಿಂದಲೇ ಸರ್ಕಾರ ನಡೆಸಲು ಜೈಲಿನಲ್ಲಿ ಕಚೇರಿ ಸ್ಥಾಪಿಸಲು ಅನುಮತಿ ಕೋರಿ ನ್ಯಾಯಾಲಯವನ್ನು ಸಂಪರ್ಕಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶನಿವಾರ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದು ಪಂಜಾಬ್ ಸಿಎಂ ಪ್ರತಿಪಾದಿಸಿದ್ದಾರೆ.

ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ದೆಹಲಿ ಮುಖ್ಯಮಂತ್ರಿಯನ್ನು ಬಂಧಿಸಿರುವ ಬಗ್ಗೆ ಮತ್ತು ಅವರು ಹೇಗೆ ಸರ್ಕಾರ ನಡೆಸುತ್ತಾರೆ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಮಾನ್, “ಸರ್ಕಾರವನ್ನು ಜೈಲಿನಿಂದ ನಡೆಸಲು ಸಾಧ್ಯವಿಲ್ಲ ಎಂದು ಎಲ್ಲಿಯೂ ಬರೆಯಲಾಗಿಲ್ಲ” ಎಂದಿದ್ದಾರೆ.

ಸದ್ಯ ಇಡಿ ವಶದಲ್ಲಿರುವ ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ, ಜೈಲಿನಿಂದಲೇ ದೆಹಲಿ ಸರ್ಕಾರ ನಡೆಸಲಿದ್ದಾರೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.

“ಕಾನೂನು ಅವರು ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಜೈಲಿನಿಂದ ಕೆಲಸ ಮಾಡಬಹುದು ಎಂದು ಹೇಳುತ್ತದೆ. ನಾವು ಜೈಲಿನಲ್ಲಿ ಕಚೇರಿ ಸ್ಥಾಪಿಸಲು ಸುಪ್ರೀಂ ಕೋರ್ಟ್, ಹೈಕೋರ್ಟ್‌ನಿಂದ ಅನುಮತಿ ಪಡೆಯುತ್ತೇವೆ ಮತ್ತು ಸರ್ಕಾರ ಕಾರ್ಯನಿರ್ವಹಿಸುತ್ತದೆ” ಎಂದು ಮಾನ್ ತಿಳಿಸಿದರು.

Latest Indian news

Popular Stories