ವ್ಯಕ್ತಿಯೊಬ್ಬ ತನ್ನ ಕಾನ್ಸ್‌ಟೇಬಲ್ ಪತ್ನಿ, ಇಬ್ಬರು ಮಕ್ಕಳು ಮತ್ತು ತಾಯಿಯನ್ನು ಕತ್ತು ಕೊಯ್ದು ಕೊಂದು ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದ ಭಾಗಲ್ಪುರ ಜಿಲ್ಲೆಯ ಪೊಲೀಸ್ ಲೈನ್‌ನಲ್ಲಿ ನಡೆದಿದೆ. ಮೃತಳನ್ನು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಚೇರಿಯಲ್ಲಿ ನಿಯೋಜಿಸಲಾದ ಬಿಹಾರ ಪೊಲೀಸ್ ಪೇದೆ ನೀತು ಕುಮಾರಿ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ನೀತು ಗಂಡ ಪಂಕಜ್ ಎಂದು ತಿಳಿದುಬಂದಿದೆ.
ಮೃತರನ್ನು 4 ವರ್ಷದ ಸಿಬು ಮತ್ತು 3 ವರ್ಷದ ಶ್ರೇಯಾ ಎಂದು ತಿಳಿದುಬಂದಿದೆ. . ಪಂಕಜ್ ಬರೆದಿದ್ದಾರೆ ಎನ್ನಲಾದ ಡೆಟ್ ನೋಟ್ ಅನ್ನು ಪೊಲೀಸರು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಪಂಕಜ್, ಆತ್ಮಹತ್ಯೆಗೂ ಮುನ್ನ ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಭಾಗಲ್ಪುರ್ ಉಪ ಪೊಲೀಸ್ ಮಹಾನಿರೀಕ್ಷಕ (ಡಿಐಜಿ) ವಿವೇಕಾನಂದ ಅವರು, ಸೋಮವಾರ-ಮಂಗಳವಾರದ ಮಧ್ಯರಾತ್ರಿ ಈ ಘಟನೆ ನಡೆದಿದೆ.
ಸ್ಥಳೀಯರ ಪ್ರಕಾರ, ಹಾಲಿನ ವ್ಯಾಪಾರಿಯೊಬ್ಬರು ರಕ್ತಸಿಕ್ತ ದೇಹಗಳನ್ನು ನೋಡಿ ನೀತು ಕುಮಾರಿ ಅವರ ನೆರೆಹೊರೆಯವರಿಗೆ ಮಾಹಿತಿ ನೀಡಿದರು. ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿದಾಗ ಕೆಲವು ಶವಗಳು ಹಾಸಿಗೆಯ ಮೇಲೆ ಬಿದ್ದಿರುವುದು ಕಂಡುಬಂದರೆ, ಕೆಲವು ಶವಗಳು ಕೋಣೆಯ ನೆಲದ ಮೇಲೆ ಕಂಡುಬಂದಿವೆ ಎಂದು ಅವರು ಹೇಳಿದರು. ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪಂಕಜ್ ಶವ ಪತ್ತೆಯಾಗಿದೆ. ಎಲ್ಲ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಡಿಐಜಿ ತಿಳಿಸಿದ್ದಾರೆ. ಸ್ಥಳೀಯ ಜನರ ಪ್ರಕಾರ, ಸೋಮವಾರ ರಾತ್ರಿ ಕ್ಷುಲ್ಲಕ ವಿಷಯಕ್ಕೆ ನೀತು ಮತ್ತು ಪಂಕಜ್ ನಡುವೆ ಜಗಳವಾಗಿತ್ತು. ಪತ್ನಿ ವ್ಯಕ್ತಿಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪಂಕಜ್ ತನ್ನ ಆತ್ಮಹತ್ಯೆ ಪತ್ರದಲ್ಲಿ ಹೇಳಿಕೊಂಡಿದ್ದಾನೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದರು.