ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು; ಕೋಲಾರದ ಟೊಮ್ಯಾಟೊಗೆ ಸಂಕಷ್ಟ!

ಬಾಂಗ್ಲಾದೇಶದಲ್ಲಿನ ರಾಜಕೀಯ ಬಿಕ್ಕಟ್ಟಿನ ಕಾರಣ ಕೊಲಾರದ ಟ್ಯೋಮ್ಯಾಟೊ ಬೇಡಿಕೆ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕೋಲಾರದ ಟೊಮೇಟೊ ಮಾರುಕಟ್ಟೆಗೆ ಪ್ರಮುಖ ಆಧಾರ ಬಾಂಗ್ಲಾದೇಶ.

ಕೋಲಾರ ಮಾರುಕಟ್ಟೆ ಏಷ್ಯಾ ಖಂಡದಲ್ಲೇ 2ನೇ ಅತೀ ದೊಡ್ಡ ಟೊಮೇಟೊ ಮಾರುಕಟ್ಟೆ ಎಂದು ಖ್ಯಾತಿ ಗಳಿಸಿದೆ. ಹಿಂದೆ ಪಾಕಿಸ್ಥಾನ, ಬಾಂಗ್ಲಾ ಹಾಗೂ ಶ್ರೀಲಂಕಾಗಳಿಗೆ ನೂರಾರು ಟನ್‌ ಟೊಮೇಟೊ ರಫ್ತಾಗುತ್ತಿತ್ತು. ಶ್ರೀಲಂಕಾದಲ್ಲಿ ಆಂತರಿಕ ಸಮಸ್ಯೆ ಮತ್ತು ಪಾಕ್‌ನೊಂದಿಗೆ ಭಾರತದ ಸಂಬಂಧ ಹಳಸಿದ ಬಳಿಕ ಕೋಲಾರ ಟೊಮೆಧೀಟೊಕ್ಕೆ ಬಾಂಗ್ಲಾ ದೇಶವೇ ಮುಖ್ಯ ವಿದೇಶಿ ಮಾರುಕಟ್ಟೆಯಾಗಿದೆ. ಕೆಲವು ವಾರಗಳಿಂದ ಏರುಗತಿಯಲ್ಲಿದ್ದ ಕೋಲಾರ ಟೊಮೇಟೊ ಧಾರಣೆ ಬಾಂಗ್ಲಾ ಬಿಕ್ಕಟ್ಟಿನ ಬಳಿಕ ಪ್ರತೀ ಬಾಕ್ಸ್‌ಗೆ 100ರಿಂದ 200 ರೂ. ಕುಸಿತ ಕಂಡಿದೆ.

ಉದಯವಾಣಿ ದಿನಪತ್ರಿಕೆ ಪ್ರಕಟಿಸಿದ ಮಾಹಿತಿಯ ಪ್ರಕಾರ, ಕೋಲಾರ ಎಪಿಎಂಸಿ ಟೊಮೇಟೊ ಮಾರುಕಟ್ಟೆಯಿಂದ ಪ್ರತೀ ನಿತ್ಯ ಬಾಂಗ್ಲಾ ದೇಶಕ್ಕೆ ಸಾಮಾನ್ಯವಾಗಿ 15ರಿಂದ 20 ಲೋಡ್‌ ಟೊಮೇಟೊ ರಫ್ತು ಮಾಡಲಾಗುತ್ತಿತ್ತು. ಬೇಡಿಕೆ ಹೆಚ್ಚಾಗಿರುವ ಸಂದರ್ಭಗಳಲ್ಲಿ ಇದು 30 ಲೋಡ್‌ ವರೆಗೂ ತಲುಪುತ್ತಿತ್ತು. ಪ್ರತೀ ಲೋಡ್‌ನ‌ಲ್ಲಿ 30 ಟನ್‌ನಂತೆ ಕೋಲಾರ ಮಾರುಕಟ್ಟೆಯಿಂದ ನಿತ್ಯ 500ರಿಂದ 1 ಸಾವಿರ ಟನ್‌ ಟೊಮೇಟೊ ಬಾಂಗ್ಲಾಕ್ಕೆ ಸಾಗಣೆಯಾಗುತ್ತಿತ್ತು. ವಿಶೇಷ ಲಾರಿಗಳು ಕೋಲಾರದಿಂದ ಬಾಂಗ್ಲಾ ಗಡಿಗೆ ಕೇವಲ 48 ತಾಸುಗಳಲ್ಲಿ ಟೊಮೇಟೋ ಮುಟ್ಟಿಸುತ್ತಿದ್ದವು. ಪ್ರತೀ ಲೋಡ್‌ಗೆ ಸುಮಾರು 2 ಲಕ್ಷ ರೂ. ವೆಚ್ಚ ತಗಲುತ್ತಿತ್ತು.

ಬಾಂಗ್ಲಾ ದೇಶದಲ್ಲಿ ಆಂತರಿಕ ದಂಗೆ ಆರಂಭವಾದ ಅನಂತರ ಕೋಲಾರದಿಂದ ಅಲ್ಲಿಗೆ ಟೊಮೇಟೊ ರಫ್ತು ಶೇ. 50ರಷ್ಟು ಕುಸಿದಿದೆ. ಈಗ ಕೇವಲ 8ರಿಂದ 12 ಲೋಡ್‌ ಸಾಗಿಸಲಾಗುತ್ತಿದೆ. ಹೀಗೆ ಕಳುಹಿಸುವ ಟೊಮೆಧೀಟೊಗೂ ಹಣ ಸಿಗುವ ಗ್ಯಾರಂಟಿ ಇಲ್ಲವಾಗಿದೆ.

50ರಿಂದ 60 ಕೋಟಿ ರೂ. ವಹಿವಾಟು
ಕೋಲಾರ ಮಾರುಕಟ್ಟೆಯಿಂದ ಬಾಂಗ್ಲಾ ದೇಶಕ್ಕೆ ಟೊಮೇಟೊ ಕಳುಹಿಸುವ ನಾಲ್ವರು ಮುಖ್ಯ ವ್ಯಾಪಾರಿಗಳಿದ್ದು, ಇವರು ಪ್ರತೀ ವರ್ಷ ಕನಿಷ್ಠ 50ರಿಂದ 60 ಕೋಟಿ ರೂ. ಮೌಲ್ಯದ ಟೊಮೇಟೊ ಕಳುಹಿಸುತ್ತಿದ್ದರು. ಕಳೆದ ವರ್ಷ ಬಾಕ್ಸ್‌ ಧಾರಣೆ 2,500 ಸಾವಿರ ರೂ.ಗೆ ಏರಿದ್ದಾಗ 100 ಕೋಟಿ ರೂ.ಗೂ ಹೆಚ್ಚು ವಹಿವಾಟು ದಾಖಲಾಗಿದೆ. ಆದರೆ ಈಗ ಈ ವ್ಯಾಪಾರಿಗಳಿಗೆ ಬಾಂಗ್ಲಾದಿಂದ 15 ಕೋಟಿ ರೂ. ಬಾಕಿ ಬರಬೇಕಾಗಿದೆ. ಬಾಂಗ್ಲಾ ದೇಶದ ಬ್ಯಾಂಕ್‌ಗಳು ನಿತ್ಯದ ವಹಿವಾಟನ್ನು 2 ಲಕ್ಷ ಟಾಕಾಕ್ಕೆ ಮಿತಿಗೊಳಿಸಿರುವುದು ಟೊಮೇಟೊ ವ್ಯಾಪಾರಿಗಳಿಗೆ ಬಾಕಿ ಹಣ ಬಾರದಿರಲು ಪ್ರಮುಖ ಕಾರಣವಾಗಿದೆ. ಇದರ ನೇರ ಪರಿಣಾಮ ಕೋಲಾರ ಟೊಮೇಟೊ ಧಾರಣೆ ಮೇಲೆ ಬಿದ್ದಿದೆ.

ಪ್ರತೀ ವರ್ಷ ಜೂನ್‌ನಿಂದ ಆಗಸ್ಟ್‌ವರೆಗೆ ಟೊಮೆಧೀಟೊ ಋತು ಆಗಿದ್ದು, ಆಗ ಎಷ್ಟು ಬೆಳೆದರೂ ಕೈತುಂಬಾ ಕಾಸು ಎನ್ನುವುದು ರೈತರ ಅನುಭವ. ಆದರೆ ಈಗ ಬಿಂಗಿ ರೋಗ, ಅತಿವೃಷ್ಟಿಯಿಂದ ಟೊಮೇಟೊ ಫಸಲು ಇಳಿಮುಖವಾಗಿದೆ. ಬಾಂಗ್ಲಾಕ್ಕೆ ಟೊಮೇಟೊ ಕಳುಹಿಸುವ ವ್ಯಾಪಾರಿಗಳು ಹರಾಜಿನಲ್ಲಿ ಭಾಗವಹಿಸದಿದ್ದರೆ ಪ್ರತೀ ಬಾಕ್ಸ್‌ ಮೇಲೆ 100ರಿಂದ 200 ರೂ. ತಾನಾಗಿಯೇ ಕುಸಿಯುತ್ತದೆ. ಹೀಗಾಗಿ ಕಳೆದ ತಿಂಗಳಿನಿಂದ ಪ್ರತೀ ಕೆ.ಜಿ.ಗೆ ಸರಾಸರಿ 20 ರೂ.ಗಿಂತ ಹೆಚ್ಚಿದ್ದ ಟೊಮೇಟೊ ಧಾರಣೆ ಮಂಗಳವಾರ 12 ರೂ.ಗೆ ಕುಸಿದಿದೆ

Latest Indian news

Popular Stories