ಒಂದೇ ವರ್ಷಕ್ಕೆ ದುರಸ್ಥಿ ಮಾಡಲಾಗದ ಸ್ಥಿತಿ ತಲುಪಿದ ಮೋದಿ ಉದ್ಘಾಟಿಸಿದ ಪ್ರಗತಿ ಮೈದಾನ ಸುರಂಗ: ಇದು ಭ್ರಷ್ಟರ ‘ಅಮೃತ ಕಾಲ’ ಎಂದ ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ಪ್ರಗತಿ ಮೈದಾನ ಸುರಂಗ ಮಾರ್ಗ ಒಂದೇ ವರ್ಷಕ್ಕೆ ದುರಸ್ಥಿ ಮಾಡಲಾಗದ ಸ್ಥಿತಿಗೆ ತಲುಪಿದೆ. ಪ್ರಗತಿ ಮೈದಾನದ ಸುರಂಗ ಯೋಜನೆಯಲ್ಲಿ ಭ್ರಷ್ಟರ ‘ಅಮೃತ ಕಾಲ’ ಮೇಲುಗೈ ಸಾಧಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 19, 2022 ರಂದು, ಕೇಂದ್ರ ದೆಹಲಿ ಮತ್ತು ನೋಯ್ಡಾ ಮತ್ತು ಗಾಜಿಯಾಬಾದ್ ನ ಉಪನಗರಗಳನ್ನು ಸಂಪರ್ಕಿಸುವ 1.3 ಕಿಮೀ ಉದ್ದದ ಪ್ರಗತಿ ಮೈದಾನ್ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಯನ್ನು ಉದ್ಘಾಟಿಸಿದ್ದರು.

ಈ ಕುರಿತು ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, “ದೇಶದಲ್ಲಿ ಭ್ರಷ್ಟರ ‘ಅಮೃತ ಕಾಲ’ ಮೇಲುಗೈ ಸಾಧಿಸುತ್ತಿದೆ” ಎಂದು ಹೇಳಿದ್ದಾರೆ.

777 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪ್ರಗತಿ ಮೈದಾನದ ಸುರಂಗ ಮಾರ್ಗ ಕೇವಲ ಒಂದೇ ವರ್ಷದಲ್ಲಿ ನಿರುಪಯುಕ್ತವಾಗಿದೆ. ಪ್ರಧಾನಿ ಪ್ರತಿ ಅಭಿವೃದ್ಧಿ ಯೋಜನೆಗೆ ‘ಪ್ಲಾನಿಂಗ್’ ಮಾಡುವ ಬದಲು ‘ಮಾಡೆಲಿಂಗ್’ ಮಾಡುತ್ತಿದ್ದಾರೆ’’ ಎಂದು ಟೀಕಿಸಿದ್ದಾರೆ.

“ಇಡಿ, ಸಿಬಿಐ, ಐಟಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿಲ್ಲ. ಆದರೆ ಪ್ರಜಾಪ್ರಭುತ್ವದ ವಿರುದ್ಧ ಹೋರಾಡುತ್ತಿವೆ” ಎಂದು ಆರೋಪಿಸಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷ, ಸುರಂಗದ ಉದ್ಘಾಟನೆಯ ನಂತರ ಪ್ರಧಾನಿ ಮೋದಿಯವರ ಫೋಟೋವನ್ನು ಹಂಚಿಕೊಂಡಿದ್ದಾರೆ.

ಪ್ರಗತಿ ಮೈದಾನ ಸುರಂಗ ಮಾರ್ಗ ದುರಸ್ತಿ ಮಾಡಲಾಗದ ಮಟ್ಟಿಗೆ ಹದಗೆಟ್ಟಿದೆ. ಈ ಸುರಂಗವನ್ನು ಈಗಿನ ಸ್ಥಿತಿಯಲ್ಲಿ ದುರಸ್ತಿ ಮಾಡುವುದು ಸಾಧ್ಯವಿಲ್ಲ. ಇದನ್ನು ಸಂಪೂರ್ಣವಾಗಿ ಬದಲಿಸಬೇಕಿದೆ ಎಂದು ದೆಹಲಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Latest Indian news

Popular Stories