ಪಾಕ್ ಪರ ಘೋಷಣೆ ಕೇಸು: ಫೊರೆನ್ಸಿಕ್ ವರದಿ ಬಂದ ನಂತರ ಕ್ರಮ ಎಂದ ಗೃಹ ಸಚಿವ ಡಾ ಪರಮೇಶ್ವರ್

ಬೆಂಗಳೂರು: ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ ಆರೋಪದ ಬಗ್ಗೆ ಕ್ರಮ ಕೈಗೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ(FSL report) ಪೊಲೀಸರು ಕಾಯುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಂಕಿತನೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ಆತನ ಧ್ವನಿಮುದ್ರಿಕೆಯನ್ನು ಪೊಲೀಸರು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದರು.

ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಡಾ ನಾಸಿರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸುತ್ತಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್ ಐಆರ್ ದಾಖಲಾಗಿದೆ.

ಘಟನೆಯ ಉದ್ದೇಶಿತ ವೀಡಿಯೊಗಳನ್ನು ಟಿವಿ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಎಲ್ಲಾ ಸುದ್ದಿವಾಹಿನಿಗಳ ವಿಡಿಯೊಗಳನ್ನು ಕಳುಹಿಸಲಾಗಿದ್ದು ಅವುಗಳನ್ನು ಪರೀಕ್ಷೆ ಮಾಡಿ ವರದಿ ಬರುವಾಗ ಸ್ವಲ್ಪ ತಡವಾಗಬಹುದು ಎಂದರು.

ಎಫ್‌ಎಸ್‌ಎಲ್‌ ವರದಿ ಇನ್ನಷ್ಟೇ ಬರಬೇಕಿದೆ. ಆದಷ್ಟು ಬೇಗ ವರದಿ ಕೇಳಿದ್ದೇವೆ. FSL ಗೆ ನೀಡಲಾದ ವೀಡಿಯೊಗಳು ಒಂದು ಚಾನಲ್ ಅಥವಾ ಒಂದು ಕ್ಲಿಪ್‌ನಿಂದ ಅಲ್ಲ. ಹಲವಾರು ಕ್ಲಿಪ್ಪಿಂಗ್‌ಗಳನ್ನು ಭದ್ರಪಡಿಸಿ ಎಫ್‌ಎಸ್‌ಎಲ್‌ಗೆ ನೀಡಲಾಗಿದೆ. ವರದಿ ಬರಬೇಕಿದ್ದು, ವರದಿ ಬಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಈವರೆಗೆ ಏಳು ಮಂದಿಯನ್ನು ಕರೆಸಿ ಹೇಳಿಕೆ ಪಡೆಯಲಾಗಿದೆ. ಜೊತೆಗೆ ಅವರ ಧ್ವನಿ ಮಾದರಿಗಳನ್ನು ಕ್ಲಿಪ್‌ನಲ್ಲಿ ಹೋಲಿಸಲು ದಾಖಲು ಮಾಡಿಕೊಳ್ಳಲಾಗಿದೆ. ‘ಶಂಕಿತನೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ಆತನ ಧ್ವನಿ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಎಫ್‌ಎಸ್‌ಎಲ್ ವರದಿ ಬಂದ ನಂತರ ನಾವು ಮುಂದಿನ ತನಿಖೆಯ ಬಗ್ಗೆ ತಿಳಿಸುತ್ತೇವೆ ಎಂದರು.

‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಆರೋಪಿಗಳನ್ನು ಬಂಧಿಸುವಲ್ಲಿ ಅಸಡ್ಡೆ ಮತ್ತು ಅಸಹಾಯಕತೆ ತೋರಿಸುತ್ತಿರುವ ಕಾಂಗ್ರೆಸ್ ಸರ್ಕಾರ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಒತ್ತಾಯಿಸಿವೆ. ಅಲ್ಲದೆ ಆಡಳಿತ ಪಕ್ಷಗಳು ಸಮಸ್ಯೆಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸರ್ಕಾರವನ್ನು ವಜಾಗೊಳಿಸಲು ಶಿಫಾರಸು ಮಾಡಬೇಕೆಂದು ಬಿಜೆಪಿ ಒತ್ತಾಯಿಸಿದೆ.

Latest Indian news

Popular Stories