ಪಾಕ್ ಪರ ಘೋಷಣೆ ವಿವಾದ: ಅಧಿಕೃತವಲ್ಲದ ಎಫ್.ಎಸ್.ಎಲ್ ವರದಿ ಪ್ರಕಟಿಸಿ ಗೊಂದಲ ಸೃಷ್ಟಿಸಿದ ಬಿಜೆಪಿ

ಸಂವಾದ ಫೌಂಡೇಷನ್ ಎಂಬ ಖಾಸಗಿ ಸಂಸ್ಥೆ ಮಾಡಿಸಿರುವ ಪರೀಕ್ಷೆಯನ್ನು ಪೊಲೀಸ್ ಇಲಾಖೆ ಮಾಡಿಸಿರುವ ಅಧಿಕೃತ ಎಫ್ ಎಸ್ ಎಲ್ ವರದಿ ಎಂಬಂತೆ ಬಿಂಬಿಸಿ, ಅದರ ಪ್ರತಿಗಳನ್ನು ಭಾರತೀಯ ಜನತಾ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಇದೀಗ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಭಾರತೀಯ ಜನತಾ ಪಕ್ಷದ ಎಕ್ಸ್ ಖಾತೆಯಲ್ಲಿ ಎಫ್ ಎಸ್ ಎಲ್ ವರದಿ ಎಂದು ಹೇಳಲಾದ ಒಂದು ಪುಟವನ್ನು ಪೋಸ್ಟ್ ಮಾಡಲಾಗಿದ್ದು, ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ ಎಂದು ಬಿಜೆಪಿ ಪೋಸ್ಟ್ ಉಲ್ಲೇಖಿಸಿದೆ.

ರಾಷ್ಟ್ರ ವಿರೋಧಿ ಧೋರಣೆಯ ಕಾಂಗ್ರೆಸ್ ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು ಎಂದು ಪೋಸ್ಟ್‌ ಮಾಡಲಾಗಿದೆ.

ಬಿಜೆಪಿಯ ಈ ಅಧಿಕೃತವಲ್ಲದ ವರದಿಯನ್ನು ಕೆಲವು ಮಾಧ್ಯಮಗಳು ಅಧಿಕೃತ ವರದಿಯಂತೆ ಪ್ರಕಟಿಸುತ್ತಿರುವುದು ಕೂಡ ಟೀಕೆಗೆ ಗುರಿಯಾಗಿದೆ.

ಫಣೀಂದ್ರ ಬಿ.ಎನ್.‌ ಎಂಬುವವರು ಸಹಿ ಮಾಡಿರುವ ಈ ವರದಿಯಲ್ಲಿ ನಾಸೀರ್‌ ಸಾಬ್‌ ಜಿಂದಾಬಾದ್‌ ಮತ್ತು ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆಗಳ ನಡುವೆ ಪಾಕಿಸ್ತಾನ್‌ ಜಿಂದಾಬಾದ್‌ ಎಂದೇ ಕೂಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆಯಾದರೂ, ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆಯನ್ನೇ ಕೂಗಲಾಗಿದೆ ಎಂದು ಉಲ್ಲೇಖಿಸಿಲ್ಲ.

ಇನ್ನು ಕನ್ನಡ ಪ್ಲಾನೆಟ್ ಪ್ರಕಟಿಸಿದ ವರದಿಯಲ್ಲಿ ಫಣೀಂದ್ರ ಬಿ.ಎನ್ ಎಂಬ ವ್ಯಕ್ತಿ ಬಲಪಂಥೀಯ ಟ್ರಾಲ್ ವ್ಯಕ್ತಿ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಬಿಜೆಪಿ ತರಾತುರಿಯಲ್ಲಿ ಯಾವುದೋ ಖಾಸಗಿ ವರದಿ ಪ್ರಕಟಿಸಿ ಪೇಚಿಗೆ ಸಿಲುಕಿದೆ‌.

Latest Indian news

Popular Stories