ಪುತ್ತೂರು: ತಾಯಿ-ಮಗನನ್ನು ಕಟ್ಟಿ ಹಾಕಿ ಮನೆ ದರೋಡೆ!

ಪುತ್ತೂರು, ಸೆ.8: ಪಡುವನೂರು ಗ್ರಾಮದ ಕುಡಕ್ಡಿ ಫಾರ್ಮ್‌ಹೌಸ್‌ನಲ್ಲಿ ದರೋಡೆಕೋರರ ತಂಡವೊಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯನ ಕುಟುಂಬದ ಮೇಲೆ ಬುಧವಾರ ತಡರಾತ್ರಿ ದಾಳಿ ನಡೆಸಿ 40 ಸಾವಿರ ನಗದು ಹಾಗೂ 150 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದೆ.

ಜಿ.ಪಂ.ಮಾಜಿ ಸದಸ್ಯ ಗುರುಪ್ರಸಾದ್ ರೈ ಕುಡ್ಕಪಾಡಿ ಅವರ ತೋಟದ ಮನೆಗೆ ನುಗ್ಗಿದ ಏಳರಿಂದ ಎಂಟು ಮಂದಿ ದರೋಡೆಕೋರರ ತಂಡ ಮನೆಯವರನ್ನೆಲ್ಲ ಕಟ್ಟಿಹಾಕಿ ಮನೆಗೆ ನುಗ್ಗಿ ದರೋಡೆ ನಡೆಸಿ ದೋಚಿದ್ದಾರೆ.

ಪೊಲೀಸರು ತೋಟದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


ರಾತ್ರಿ 2 ಗಂಟೆ ಸುಮಾರಿಗೆ ದರೋಡೆಕೋರರ ತಂಡ ಮನೆಯ ಹಿಂಬಾಗಿಲ ಮೂಲಕ ಮನೆಗೆ ನುಗ್ಗಿದೆ. ಗುರುಪ್ರಸಾದ್ ರೈ ಕುಡ್ಕಪಾಡಿ ಹಾಗೂ ಅವರ ತಾಯಿ ಕಸ್ತೂರಿ ರೈ ಮೇಲೆ ಗುಂಪು ಚಾಕು ತೋರಿಸಿ ಬೆದರಿಸಿ ಕಟ್ಟಿ ಹಾಕಿದೆ. ಬಳಿಕ ಕಬೋರ್ಡ್ ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ನಗದು ಸಹಿತ ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಗುರುಪ್ರಸಾದ್ ಅವಿವಾಹಿತರಾಗಿದ್ದು, ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಕಾಸರಗೋಡಿನ ನಾರಂಪಾಡಿಯಲ್ಲಿ ವಾಸವಿದ್ದ ಅವರ ತಾಯಿ ಬುಧವಾರ ನೆರೆಹೊರೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಗನ ಮನೆಗೆ ಬಂದಿದ್ದರು. ತಾಯಿ ಮಗ ಇಬ್ಬರೂ ಊಟ ಮುಗಿಸಿ ಮಲಗಿದ್ದರು.

ದರೋಡೆಕೋರರ ತಂಡ ತುಳು ಮತ್ತು ಕನ್ನಡದಲ್ಲಿ ಸಂಭಾಷಣೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಗುರುಪ್ರಸಾದ್ ರೈ ಅವರ ಮೊಬೈಲ್ ಅನ್ನು ನೀರಿಗೆ ಎಸೆದು ಇಡೀ ಮನೆಯನ್ನು ಶೋಧಿಸಿದ್ದಾರೆ. ಬೈಕ್ ಕೀಯನ್ನು ಎಸೆದು ಪೆಟ್ರೋಲ್ ತಂತಿಯನ್ನು ತುಂಡರಿಸಿದ್ದಾರೆ.

ಗ್ಯಾಂಗ್‌ನ ಕೆಲವು ಸದಸ್ಯರು ಹ್ಯಾಂಡ್ ಗ್ಲೌಸ್‌ನೊಂದಿಗೆ ಮಂಕಿ ಕ್ಯಾಪ್‌ಗಳನ್ನು ಧರಿಸಿದ್ದರು, ಇನ್ನು ಕೆಲವರು ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿದ್ದರು. ಅವರು ತಾಯಿ ಮತ್ತು ಮಗನ ಮೇಲೆ ಚಾಕು ಬೀಸಿದರು ಮತ್ತು ಮನೆ ದರೋಡೆ ಮುಗಿಸುವವರೆಗೂ ಇಬ್ಬರ ಮೇಲೆ ಕತ್ತಿ ಇಟ್ಟು ಬೆದರಿಕೆ ಹಾಕುತ್ತಿದ್ದರು.

ವಿವಿಧ ಕಪಾಟುಗಳನ್ನು ಶೋಧಿಸಿದ ದರೋಡೆಕೋರರ ತಂಡವು ಅಲ್ಮೇರಾವನ್ನು ಒಡೆಯುವುದು ಕಷ್ಟಕರವೆಂದು ಕಂಡುಕೊಂಡು. ಅಲ್ಮೇರಾದ ಬೀಗವನ್ನು ಒಡೆಯಲು 90 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ.ನಂತರ ಪ್ರಯತ್ನದಲ್ಲಿ ಯಶಸ್ವಿಯಾಗಿ ಮನೆ ದರೋಡೆ ಮುಗಿಸಿ ಸ್ಥಳದಿಂದ ಪರಾರಿಯಾಗುವ ವೇಳೆಗೆ ಬೆಳಗಿನ ಜಾವ 4 ಗಂಟೆಯಾಗಿತ್ತು.

ಕುಡ್ಕಪಾಡಿ ಫಾರ್ಮ್‌ಹೌಸ್ ನಿರ್ಜನ ಪ್ರದೇಶವಾಗಿದ್ದು, ಬೆಟ್ಟಗುಡ್ಡಗಳಿಂದ ಆವೃತವಾಗಿತ್ತು. ಹತ್ತಿರದಲ್ಲಿ ಯಾವುದೇ ಮನೆಗಳಿಲ್ಲ. ತೋಟದ ಮನೆ ತಲುಪಲು ಸ್ವಲ್ಪ ಸಮಯ ಹಿಡಿಯುತ್ತದೆ. ದರೋಡೆಕೋರರಿಗೆ ಸ್ಥಳವನ್ನು ತಲುಪುವ ಬಗ್ಗೆ ಸಾಕಷ್ಟು ಜ್ಞಾನ ಮತ್ತು ಮಾಹಿತಿ ಇತ್ತು ಎಂದು ಹೇಳಲಾಗುತ್ತಿದೆ. ಗೊತ್ತಿರುವ ವ್ಯಕ್ತಿಗಳು ಮಾತ್ರ ಅಪರಾಧದ ಹಿಂದೆ ಇರಬಹುದೆಂದು ಹೇಳಲಾಗಿದೆ.

ಗುರುಪ್ರಸಾದ್ ರೈ ಕಾಸರಗೋಡಿನಲ್ಲಿ ನೆಲೆಸಿದ್ದ ಕಾರ್ಮಿಕನೊಬ್ಬನನ್ನು ಕೆಲಸಕ್ಕೆ ಇಟ್ಟಿದ್ದರು. ಮೂರು ದಿನಗಳ ಹಿಂದೆ ಕೆಲಸ ಬಿಟ್ಟಿದ್ದ.

ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತ, ಎಸ್‌ಪಿ ಸಿ.ಬಿ.ರಿಷ್ಯಂತ್‌ ಭೇಟಿ ನೀಡಿದ್ದಾರೆ. ಪುತ್ತೂರು ಡಿವೈಎಸ್ಪಿ ಗಣ ಪಿ ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ ಎಸ್ ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಮತ್ತು ಇತರ ವಿಧಿವಿಜ್ಞಾನ ತಜ್ಞರು ಹಾಗೂ ಸ್ನಿಫರ್ ಡಾಗ್ ಸ್ಕ್ವಾಡ್ ಕೂಡ ಫಾರ್ಮ್‌ಹೌಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Latest Indian news

Popular Stories