ಮುಂಬಯಿ: ಖ್ಯಾತ ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರ ತವರು ಪಟ್ಟಣವಾದ ಶಹಜಹಾನ್‌ಪುರದಲ್ಲಿರುವ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಬ್ಯಾಂಕ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಮುಂಬೈನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಉತ್ತರ ಪ್ರದೇಶದ ಶಹಜಹಾನ್‌ಪುರಕ್ಕೆ ಆಗಮಿಸಿ ಭಾನುವಾರ ಆಸ್ತಿಯ ಮೇಲೆ ಬ್ಯಾನರ್ ಹಾಕಿದ್ದಾರೆ. ಆಸ್ತಿಯು ಮುಂಬೈನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ್ದು, ಯಾವುದೇ ರೀತಿಯ ಖರೀದಿ ಅಥವಾ ಮಾರಾಟವನ್ನು ಮಾಡಲು ಸಾಧ್ಯವಿಲ್ಲ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.ರಾಜ್‌ಪಾಲ್ ಯಾದವ್ ಅವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯದ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. 2012 ರಲ್ಲಿ ಅಟಾ ಪಟಾ ಲಪಟ್ಟಾ ಎಂಬ ಚಲನಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ. ಚಲನಚಿತ್ರವನ್ನು ನಿರ್ಮಿಸಲು, ರಾಜ್‌ಪಾಲ್ ಅವರು ಸೆಂಟ್ರಲ್ ಬ್ಯಾಕ್ ಆಫ್ ಇಂಡಿಯಾದ ಬಾಂದ್ರಾ, ಮುಂಬೈ ಶಾಖೆಯಿಂದ 5 ಕೋಟಿ ರೂಪಾಯಿ ಸಾಲವನ್ನು ತೆಗೆದುಕೊಂಡಿದ್ದರು. ಸಾಲವನ್ನು ಮರುಪಾವತಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.2018 ರಲ್ಲಿ ರಾಜ್ ಪಾಲ್ ಯಾದವ್ ಅವರು ಮೂರು ತಿಂಗಳ ಜೈಲು ಶಿಕ್ಷೆಯನ್ನೂ ಸಾಲ ಮರು ಪಾವತಿ ಮಾಡದ ಕಾರಣಕ್ಕಾಗಿ ಅನುಭವಿಸಿದ್ದರು. 5 ಕೋಟಿ ರೂ. ಸಾಲ ಈಗ 11 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.