ರಾಜ್ಯಸಭಾ ಚುನಾವಣೆ: ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಗೆ ಬಿಜೆಪಿ ಶೋಕಾಸ್ ನೋಟಿಸ್

ಬೆಂಗಳೂರು: ಇತ್ತೀಚಿಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಯಶವಂತಪುರದ ಶಾಸಕ ಎಸ್.ಟಿ. ಸೋಮಶೇಖರ್ ಹಾಗೂ ಮತದಾನದಿಂದ ದೂರ ಉಳಿದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಬಿಜೆಪಿ ಮುಖ್ಯ ಸಚೇತಕರು ಶೋಕಾಸ್ ನೋಟಿಸ್ ನೀಡಿದ್ದಾರೆ.

ಫೆಬ್ರವರಿ 27 ರಂದು ನಡೆದ ಚುನಾವಣೆಯಲ್ಲಿ ಎಸ್ ಟಿ ಸೋಮಶೇಖರ್ ಬಿಜೆಪಿ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಾಕೇನ್ ಗೆ ಅಡ್ಡ ಮತದಾನ ಮಾಡಿದ ನಂತರ ಕಾಂಗ್ರೆಸ್ ಮೂರು ರಾಜ್ಯಸಭಾ ಸ್ಥಾನಗಳನ್ನು ಗೆದ್ದುಕೊಂಡರೆ, ಬಿಜೆಪಿ ಕೇವಲ ಒಂದು ಸ್ಥಾನ ಗಳಿಸಿತ್ತು. ಇದು ಕೇಸರಿ ಪಕ್ಷಕ್ಕೆ ದೊಡ್ಡ ಹಿನ್ನೆಡೆಯುಂಟುಮಾಡಿತ್ತು.

ಕೆಲ ತಿಂಗಳುಗಳಿಂದ ಪಕ್ಷದ ನಾಯಕ್ವದೊಂದಿಗೆ ಅಸಮಾಧಾನ ಹೊಂದಿದ್ದ ಎಸ್. ಟಿ. ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್, ಕಾಂಗ್ರೆಸ್ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಈ ಇಬ್ಬರೂ ಶಾಸಕರು 2019ರಲ್ಲಿ ಇತರ 15 ಮಂದಿಯೊಂದಿಗೆ ಬಿಜೆಪಿ ಸೇರ್ಪಡೆಯಾಗುವ ಮೂಲಕ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಅಜಯ್ ಮಾಕೇನ್, ನಾಸೀರ್ ಹುಸೈನ್ ಮತ್ತು ಜಿಸಿ ಚಂದ್ರಶೇಖರ್, ಬಿಜೆಪಿಯ ನಾರಾಯಣ ಬಾಡಂಗೆ ಗೆಲುವು ಸಾಧಿಸಿದರೆ, ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಡಿ ಕುಪೇಂದ್ರ ರೆಡ್ಡಿ ಸೋಲನ್ನುಭವಿಸಿದರು.

Latest Indian news

Popular Stories