ಖ್ಯಾತ ಲೇಖಕಿ ಅರುಂಧತಿ ರಾಯ್​​ಗೆ ಪ್ರತಿಷ್ಠಿತ ಪೆನ್ ಪಿಂಟರ್ ಪ್ರಶಸ್ತಿ

ನವದೆಹಲಿ: ಬೂಕರ್ ಪ್ರಶಸ್ತಿ ವಿಜೇತ ಲೇಖಕಿ, ಹೋರಾಟಗಾರ್ತಿ ಅರುಂಧತಿ ರಾಯ್ ಅವರು ಗುರುವಾರ ತಮ್ಮ ಅಚಲ ಮತ್ತು ದೃಢ ಬರಹಗಳಿಗಾಗಿ 2024ನೇ ಸಾಲಿನ ಪ್ರತಿಷ್ಠಿತ ಪೆನ್ ಪಿಂಟರ್ ಪ್ರಶಸ್ತಿ ಭಾಜನರಾಗಿದ್ದಾರೆ.

ನೊಬೆಲ್ ಪ್ರಶಸ್ತಿ ಪುರಸ್ಕೃತ ನಾಟಕಕಾರ ಹೆರಾಲ್ಡ್ ಪಿಂಟರ್ ಅವರ ನೆನಪಿಗಾಗಿ ಇಂಗ್ಲಿಷ್ PEN 2009 ರಲ್ಲಿ ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿ ಇದಾಗಿದ್ದು, ಇದನ್ನು ಸಾಹಿತ್ಯದಲ್ಲಿ ಅಪರಿಮಿತ ಸಾಧನೆಗೈದವರಿಗೆ ನೀಡಲಾಗುತ್ತಿದೆ.

62 ವರ್ಷದ ಅರುಂಧತಿ ರಾಯ್ ಅವರು ಅಕ್ಟೋಬರ್ 10 ರಂದು ಬ್ರಿಟಿಷ್ ಲೈಬ್ರರಿ ಆಯೋಜನೆ ಮಾಡುವ ಸಮಾರಂಭದಲ್ಲಿ ಪೆನ್ ಪಿಂಟರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಅರುಂಧತಿ ರಾಯ್ ಅವರು ಅನ್ಯಾಯದ ತುರ್ತು ಕಥೆಗಳನ್ನು ಬುದ್ಧಿವಂತಿಕೆಯಿಂದ ಮತ್ತು ಚಂದವಾಗಿ ಹೇಳುತ್ತಾರೆ ಎಂದು ಇಂಗ್ಲಿಷ್‌ ಪೆನ್‌ ಅಧ್ಯಕ್ಷ ರುತ್‌ ಬೊರ್ತ್‌ವಿಕ್‌ ಶ್ಲಾಘಿಸಿದ್ದಾರೆ.

ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಅರುಂಧತಿ ರಾಯ್ ಅವರು, ಇದೀಗ ಜಗತ್ತು ತೆಗೆದುಕೊಳ್ಳುತ್ತಿರುವ ಬಹುತೇಕ ತಿರುವಿನ ಬಗ್ಗೆ ಬರೆಯಲು ಹೆರಾಲ್ಡ್ ಪಿಂಟರ್ ಇಂದು ನಮ್ಮೊಂದಿಗೆ ಇರಬೇಕಿತ್ತು ಎಂದು ಅನಿಸುತ್ತದೆ. ಅವರು ಇಲ್ಲದ ಕಾರಣ, ಅವರಂತೆ ಕೆಲಸ ಮಾಡಲು ನಮ್ಮಲ್ಲಿರುವವರು ತಮ್ಮ ಕೈಲಾದಷ್ಟು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.

Latest Indian news

Popular Stories