Featured StoryState News

ಯಡಿಯೂರಪ್ಪರನ್ನು ಅವಮಾನಿಸಿದರೂ ಹಿರಿಯ ನಾಯಕರ ಮೌನ “ದುರದೃಷ್ಟಕರ”: ವಿಜಯೇಂದ್ರ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ತಮ್ಮ ತಂದೆ ಮತ್ತು ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಕೆಲವು ನಾಯಕರು “ಅವಮಾನಕರ” ಹೇಳಿಕೆಗಳನ್ನು ನೀಡುತ್ತಿದ್ದರೂ ಪಕ್ಷದ ಹಿರಿಯ ನಾಯಕರು ತಡೆಯದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾವುದೇ ಬಣದ ಭಾಗವಲ್ಲದ ಮತ್ತು “ತಟಸ್ಥ”ವಾಗಿರುವ ಪಕ್ಷದ ಹಲವಾರು ಹಿರಿಯ ನಾಯಕರನ್ನು ಗುರಿಯಾಗಿರಿಸಿಕೊಂಡು ವಿಜಯೇಂದ್ರ ಈ ಹೇಳಿಕೆ ನೀಡಿದ್ದು, ಹಿರಿಯ ನಾಯಕರ ಮೌನ “ದುರದೃಷ್ಟಕರ” ಎಂದಿದ್ದಾರೆ.

“ರಾಜ್ಯ ಅಧ್ಯಕ್ಷರ ಆಯ್ಕೆ ಅಥವಾ ಆಯ್ಕೆ ಪ್ರಕ್ರಿಯೆ ಯಾವುದೇ ಕ್ಷಣದಲ್ಲಿ ನಡೆಯಬಹುದು. ಫೆಬ್ರವರಿ 20 ರೊಳಗೆ ಇಡೀ ಪ್ರಕ್ರಿಯೆಯು ಪೂರ್ಣಗೊಳ್ಳುವ ಸೂಚನೆಗಳಿವೆ. ಕೆಲವು ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ಕೆಲವು ಕಾರಣಗಳಿಂದಾಗಿ ನಾನು ಅವುಗಳಿಗೆ ಪ್ರತಿಕ್ರಿಯಿಸಿಲ್ಲ. ಏಕೆಂದರೆ ಅದು ಪಕ್ಷ ಮತ್ತು ಕಾರ್ಯಕರ್ತರಿಗೆ ಮುಜುಗರವನ್ನುಂಟುಮಾಡಬಹುದು” ಎಂದು ವಿಜಯೇಂದ್ರ ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇತರರು, ವಿಶೇಷವಾಗಿ ಪಕ್ಷದ ಹಿರಿಯರು ತಮ್ಮ ವಿರುದ್ಧ ಮಾತನಾಡುತ್ತಿರುವುದರಿಂದ ನನಗೆ ಯಾವುದೇ ಬೇಸರ ಇಲ್ಲ. “ಆದರೆ, ಈ ಪಕ್ಷವನ್ನು ಕಟ್ಟಿದ ನಾಯಕ ಯಡಿಯೂರಪ್ಪ ಅವರ ವಿರುದ್ಧ ಕೀಳು ಮಟ್ಟದ ಭಾಷೆಯನ್ನು ಬಳಸುತ್ತಿರುವುದು ದುರದೃಷ್ಟಕರ ಮತ್ತು ಇದನ್ನೆಲ್ಲ ನೋಡುತ್ತಾ ಕುಳಿತುಕೊಳ್ಳುವುದು ಸಹ ಸರಿಯಲ್ಲ” ಎಂದಿದ್ದಾರೆ.

ಕಳೆದ ಒಂದು ವರ್ಷದಿಂದ ಯಡಿಯೂರಪ್ಪ ಅವರನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ ಮತ್ತು ಅಗೌರವಿಸಲಾಗುತ್ತಿದೆ ಎಂದ ವಿಜಯೇಂದ್ರ, ಅವರ ವಿರುದ್ಧ ಹಲವರು ಹೇಳಿಕೆ ನೀಡುತ್ತಿದ್ದರೂ, ಅದು ತಪ್ಪು ಎಂದು ಹೇಳುವ ಮೂಲಕ ಯಾರೂ ಅವರನ್ನು ತಡೆಯಲು ಪ್ರಯತ್ನಿಸದಿರುವುದು ದುರದೃಷ್ಟಕರ ಎಂದರು.

“ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುತ್ತಿರುವವರನ್ನು ಪಕ್ಷದ ಹಿರಿಯರು ಈಗಲಾದರೂ ತಡೆಯಬೇಕು ಎಂದು ನಾನು ವಿನಂತಿಸುತ್ತೇನೆ. ಸಮಸ್ಯೆ ಇರುವವರು ಅದನ್ನು ಹೈಕಮಾಂಡ್ ಜೊತೆ ಹಂಚಿಕೊಳ್ಳಲಿ. ಆದರೆ ಅಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ನಾನು ಇದನ್ನು ಸಾರ್ವಜನಿಕವಾಗಿಯೇ ಹೇಳುತ್ತಿದ್ದೇನೆ” ಎಂದರು.

“ಅಧ್ಯಕ್ಷನಾಗಿ ಮತ್ತು ಯಡಿಯೂರಪ್ಪ ಅವರ ಮಗನಾಗಿ, ತಟಸ್ಥವಾಗಿರುವ ಮತ್ತು ಇತರ ಹಿರಿಯ ನಾಯಕರು, ತಂದೆ ವಿರುದ್ಧ ಹೇಳಿಕೆ ನೀಡುತ್ತಿರುವವರನ್ನು ತಡೆಯುತ್ತಿಲ್ಲ. ಇದರಿಂದ ನನಗೆ ನೋವಾಗಿದೆ” ಎಂದು ವಿಜಯೇಂದ್ರ ಹೇಳಿದ್ದಾರೆ.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button