ಬಿಜೆಪಿ-ಜೆಡಿಎಸ್ ಮೈತ್ರಿಗೆ ಹಿನ್ನಡೆ; ಬಿ ಫಾರಂ ಇಲ್ಲದೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಇಸಿ ನಿಂಗರಾಜೇಗೌಡ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಮುಖಂಡ ಇಸಿ ನಿಂಗರಾಜೇಗೌಡ ಬುಧವಾರ ಬಿ ಫಾರಂ ಇಲ್ಲದೆಯೇ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ.

ಬಿಜೆಪಿ ಹೈಕಮಾಂಡ್ ಮೇ 11 ರಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿ ನಿಂಗರಾಜೇಗೌಡ ಅವರನ್ನು ಘೋಷಿಸಿತ್ತು. ಆದರೆ, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒತ್ತಾಯಿಸಿದ ನಂತರ, ಬಿಜೆಪಿ ತನ್ನ ಪಾಲುದಾರ ಪಕ್ಷವೇ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಒಪ್ಪಿಗೆ ನೀಡಿತು.

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಉದ್ಯಮಿ ವಿವೇಕಾನಂದ ಅವರಿಗೆ ದೇವೇಗೌಡರು ಬುಧವಾರ ಟಿಕೆಟ್ ನೀಡಿದ್ದಾರೆ.

ಇದರಿಂದ ನಿರಾಸೆಗೊಂಡ ನಿಂಗರಾಜೇಗೌಡ ಅವರು ಪಕ್ಷದ ಬಿ ಫಾರಂ ಇಲ್ಲದೆಯೇ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಪ್ರಾಚಾರ್ಯರಾದ ವೈಎಚ್ ಲೋಹಿತ್ ಕುಮಾರ್, ಬಿಎನ್ ಸುರೇಶ್, ಡಿ ಶ್ರೀಕಂಠೇಗೌಡ, ಎಂಎಸ್ ಉಮಾಶಂಕರ್ ಆರಾದ್ಯ ಇದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಇಂದು ದಿನ ಚೆನ್ನಾಗಿದೆ ಎಂದು ಬಿ ಫಾರಂ ಇಲ್ಲದೆ ನಾಮಪತ್ರ ಸಲ್ಲಿಸಿದ್ದೇನೆ. ಗುರುವಾರ ಬೆಳಗ್ಗೆ ಬಿಜೆಪಿ ಮತ್ತು ಜೆಡಿಎಸ್​ ಮುಖಂಡರೊಂದಿಗೆ ಬಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತೇನೆ. ಸಂಜೆ ಬೆಂಗಳೂರಿಗೆ ಹೋಗುತ್ತಿದ್ದು, ಬಿ ಫಾರಂ ಸಿಗಲಿದೆ. ನಾನು ಬಿಜೆಪಿ ಮತ್ತು ಜೆಡಿಎಸ್​ನ ಎನ್​ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾಳೆ ಬಿ ಫಾರಂನೊಂದಿಗೆ ಬಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತೇನೆ ಎಂದರು.

ನನಗೆ ಶನಿವಾರವೇ ಟಿಕೆಟ್ ಘೋಷಣೆಯಾಗಿದೆ. ಈಗ ಬೆಂಗಳೂರಿನ ಬಿಜೆಪಿ ಕಚೇರಿಗೆ ಬರುವಂತೆ ಕರೆದಿದ್ದಾರೆ. ಅಲ್ಲಿ ನಾಮಪತ್ರ ಸಲ್ಲಿಸಲು ಯಾರ್‍ಯಾರು ಜೊತೆಗೆ ಇರುತ್ತಾರೆ ಎಂಬುದು ನಿರ್ಧಾರ ಆಗುತ್ತದೆ.​ ಬಿಜೆಪಿಯಲ್ಲಿ ಒಮ್ಮೆ ಅಭ್ಯರ್ಥಿ ಘೋಷಣೆ ಮಾಡಿದರೆ ಮುಗಿಯಿತು. ಬದಲಾಯಿಸುವ ಪ್ರಶ್ನೆಯೇ ಇಲ್ಲ. ಇಲ್ಲಿ 10 ಜನ ಆಕಾಂಕ್ಷಿಗಳಿದ್ದೆವು, ನನ್ನ ಹೆಸರು ಘೋಷಣೆಯಾದ ಬಳಿಕ 9 ಜನ ನನ್ನೊಂದಿಗೆ ಇದ್ದಾರೆ. ನಾವು ಚುನಾವಣಾ ಪ್ರಚಾರವನ್ನು ಶುರು ಮಾಡಿದ್ದೇವೆ. ಜೆಡಿಎಸ್​ನಲ್ಲಿ ವಿವೇಕಾನಂದ ಅವರಿಗೆ ಬಿ ಫಾರಂ ನೀಡಿರುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು.

Latest Indian news

Popular Stories