ಮಂಡ್ಯ: ಹನುಮ ಜಯಂತಿ ಅಂಗವಾಗಿ ಹಿಂದೂ ಜಾಗರಣಾ ವೇದಿಕೆಯಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಭಾನುವಾರ ಬಿಗಿ ಪೊಲೀಸ್ ಭದ್ರತೆಯಲ್ಲಿ ಸಂಕೀರ್ತನಾ ಯಾತ್ರೆ ನಡೆಯಿತು. ಶಾಂತಯುತವಾಗಿ ಮೆರವಣಿಗೆ ಮುಕ್ತಾಯವಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಮಿಷಾಂಬ ದೇವಾಲಯದ ಎದುರಿನ ಆಂಜನೇಯ ಸ್ವಾಮಿ ದೇಗುಲದಿಂದ ಆರಂಭವಾದ ಯಾತ್ರೆ ಶ್ರೀರಂಗನಾಥ ಸ್ವಾಮಿ ದೇಗುಲದ ಬಳಿ ಮುಕ್ತಾಯವಾಯಿತು. ಕೇಸರಿ ಶಾಲು ಧರಿಸಿದ್ದ ಕಾರ್ಯಕರ್ತರು, ಭಜನೆ, ಘೋಷಣೆ ಕೂಗುವ ಮೂಲಕ ಸುಮಾರು 4.3 ಕಿ. ಮೀ ದೂರ ಯಾತ್ರೆಯಲ್ಲಿ ಸಾಗಿದರು. ಯಾತ್ರೆ ಸಾಗುತ್ತಿದ್ದ ಜಾಮೀಯಾ ಮಸೀದಿ ಸುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಮುಂಜಾಗ್ರತಾ ಕ್ರಮವಾಗಿ ಶನಿವಾರ ಮತ್ತು ಭಾನುವಾರ ಮಸೀದಿಯನ್ನು ಬಂದ್ ಮಾಡಲಾಗಿತ್ತು. ಯಾವುದೇ ಅಹಿತರ ಘಟನೆ ನಡೆಯದಂತೆ ಕೆಎಸ್ ಆರ್ ಪಿ, ಜಿಲ್ಲಾ ಶಸಾಸ್ತ್ರ ಮೀಸಲು ಪಡೆ ನಿಯೋಜಿಸಲಾಗಿತ್ತು. 110 ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ, ವಿಡಿಯೋ ಮತ್ತು ಡ್ರೋನ್ ಕ್ಯಾಮರಾ ಅಳವಡಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.