ಕೇಜ್ರಿವಾಲ್ ಗೆ ಸುಪ್ರೀಂ ಕೋರ್ಟ್ ವಿಶೇಷ ಆತಿಥ್ಯ ನೀಡಿದೆ: ಅಮಿತ್ ಶಾ ಟೀಕೆ

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ, ವಿಶೇಷ ಆತಿಥ್ಯ ನೀಡಲಾಗಿದೆ ಎಂದು ಜನ ಭಾವಿಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಟೀಕಿಸಿದ್ದಾರೆ.

ಕೇಜ್ರಿವಾಲ್ ಪ್ರಕರಣದ ತೀರ್ಪು ಸಾಮಾನ್ಯ ನ್ಯಾಯಾಂಗ ಆದೇಶವಲ್ಲ ಎಂದು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

“ಕಾನೂನನ್ನು ಅರ್ಥೈಸುವ ಹಕ್ಕು ಸುಪ್ರೀಂ ಕೋರ್ಟ್‌ಗೆ ಇದೆ. ಇದು ವಾಡಿಕೆಯ ತೀರ್ಪು ಅಲ್ಲ ಎಂದು ನಾನು ನಂಬುತ್ತೇನೆ. ಈ ದೇಶದ ಬಹಳಷ್ಟು ಜನರು ದೆಹಲಿ ಸಿಎಂಗೆ ವಿಶೇಷ ಆತಿಥ್ಯ ನೀಡಲಾಗಿದೆ ಎಂದು ನಂಬುತ್ತಾರೆ” ಎಂದು ಶಾ ಎಎನ್‌ಐಗೆ ತಿಳಿಸಿದ್ದಾರೆ.

2024 ರ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪರವಾಗಿ ಕೇಜ್ರಿವಾಲ್ ಪ್ರಚಾರ ನಡೆಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, “ಸದ್ಯ ಅವರು(ಅರವಿಂದ್ ಕೇಜ್ರಿವಾಲ್) ಮತ್ತೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ(ಸಿಎಂ ಸಹಾಯಕರಿಂದ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಆರೋಪ). ಅದರಿಂದ ಅವರು ಮುಕ್ತರಾಗಲಿ, ನಂತರ ಏನಾಗುತ್ತದೆ ಎಂದು ನೋಡೋಣ” ಎಂದು ಹೇಳಿದರು.

ತನ್ನ ಮೇಲೆ ನಿಗಾ ಇಡಲು ಕೇಂದ್ರ ಸರ್ಕಾರ ತಿಹಾರ್ ಜೈಲಿನಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದೆ ಎಂಬ ಕೇಜ್ರಿವಾಲ್ ಹೇಳಿಕೆಯನ್ನು ತಳ್ಳಿಹಾಕಿದ ಶಾ, ತಿಹಾರ್ ಜೈಲು ಆಡಳಿತವು ದೆಹಲಿ ಸರ್ಕಾರದ ಬಳಿ ಇದೆ ಎಂದು ಹೇಳಿದರು.

“ತಿಹಾರ್ ಅವರೊಂದಿಗೆ(ದೆಹಲಿ ಸರ್ಕಾರ) ಇದೆ, ನಮ್ಮೊಂದಿಗೆ ಅಲ್ಲ. ಅವರು ನಿರಂತರವಾಗಿ ಸುಳ್ಳು ಹೇಳುತ್ತಿದ್ದಾರೆ. ಜೈಲು ಆಡಳಿತವು ದೆಹಲಿ ಸರ್ಕಾರದ ಬಳಿ ಇದೆ. ಅದು ಕೇಜ್ರಿವಾಲ್ ಬಳಿ ಇದೆ. ಗೃಹ ಸಚಿವಾಲಯದ ಬಳಿ ಅಲ್ಲ” ಎಂದು ಶಾ ಹೇಳಿದರು.

ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೇ 10 ರಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥರಿಗೆ ಮಧ್ಯಂತರ ಜಾಮೀನು ನೀಡಿದೆ.

Latest Indian news

Popular Stories