ವಿಪಕ್ಷಗಳ ಮೈತ್ರಿಕೂಟಕ್ಕೆ INDIA ಹೆಸರು; ನಿರ್ಬಂಧ ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ, ಅರ್ಜಿ ವಜಾ

ನವದೆಹಲಿ: ವಿರೋಧ ಪಕ್ಷಗಳ ಮಿತ್ರಕೂಟಕ್ಕೆ ಇಂಡಿಯಾ ಎಂಬ ಹೆಸರು ನೀಡಿರುವ ಕುರಿತಂತೆ ನಿರ್ಬಂಧ ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ ವ್ಯಕ್ತಪಡಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.

ವಿರೋಧ ಪಕ್ಷಗಳ ಒಕ್ಕೂಟಕ್ಕೆ ಐಎನ್‌ಡಿಐಎ (INDIA) ಎಂದು ನಾಮಕರಣ ಮಾಡಿದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ (Supreme Court) ನಿರಾಕರಿಸಿದ್ದು, ಚುನಾವಣಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಿ ಎಂದು ಅರ್ಜಿಯನ್ನು ವಜಾಗೊಳಿಸಿದೆ.

26 ರಾಜಕೀಯ ಪಕ್ಷಗಳ ಮೈತ್ರಿಗೆ ನೀಡಿರುವ INDIA ಹೆಸರನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಇಂದು ನ್ಯಾ. ಎಸ್‌ಕೆ ಕೌಲ್ ನೇತೃತ್ವದ ಪೀಠದಲ್ಲಿ ನಡೆಯಿತು. ಈ ವೇಳೆ ಅರ್ಜಿ ಸಲ್ಲಿಸಲು ಯಾರು ನೀವು? ನಿಮ್ಮ ಆಸಕ್ತಿ ಏನು? ಎಂದು ಪೀಠ ಕೇಳಿತು. ಅಲ್ಲದೆ ಚುನಾವಣಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದರೆ ಚುನಾವಣಾ ಆಯೋಗಕ್ಕೆ (Election commission) ಹೋಗಿ ದೂರು ನೀಡಿ. ಅದು ಬಿಟ್ಟು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದು ಸರಿಯಲ್ಲ. ನಿಮಗೆ ಸಂಪೂರ್ಣ ಪ್ರಚಾರ ಬೇಕು ಎಂಬ ಉದ್ದೇಶದಿಂದ ಅರ್ಜಿ ಸಲ್ಲಿಕೆ ಮಾಡಿದ್ದೀರಿ. ಆದರೆ ನಾವು ಇದನ್ನು ಪರಿಗಣಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.

ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದ್ದು, ಪ್ರಚಾರ ಬೇಕಿದ್ದರೆ ಮಾಧ್ಯಮ ಸಂಸ್ಥೆಗಳಿಗೆ ಸಂದರ್ಶನ ನೀಡುತ್ತಿದ್ದರು. ಆದರೆ ಅವರು ಅವುಗಳಿಂದ ದೂರವಿದ್ದಾರೆ ಎಂದು ವಾದಿಸಿದರು. ಹೆಸರನ್ನು ಬಳಸುವುದು ನೈತಿಕತೆಗೆ ವಿರುದ್ಧವಾಗಿದೆ ಎಂದು ಅರ್ಜಿದಾರರ ವಾದಕ್ಕೆ ನ್ಯಾ. ಕೌಲ್, ನಾವು ರಾಜಕೀಯದಲ್ಲಿ ನೈತಿಕತೆಯನ್ನು ನಿರ್ಧರಿಸಲು ಹೋಗುವುದಿಲ್ಲ ಎಂದು ಉತ್ತರಿಸಿ ಭಾರತೀಯ ಚುನಾವಣಾ ಆಯೋಗದ ಮುಂದೆ ಅರ್ಜಿಗಳನ್ನು ಸಲ್ಲಿಸಿ ಎಂದು ಸೂಚಿಸಿತು. ಸುಪ್ರೀಂ ಸೂಚನೆಯ ಬೆನ್ನಲ್ಲೇ ಅರ್ಜಿದಾರರು ಅರ್ಜಿಯನ್ನು ಹಿಂದಕ್ಕೆ ಪಡೆದರು. 

Latest Indian news

Popular Stories