ಸೂರಜ್​ನಿಂದ ಜೆಡಿಎಸ್ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಆರೋಪ: ಎಚ್.ಡಿ.ಕೆ ಹೇಳಿದ್ದೇನು?

ಹಾಸನ: ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲು ಪಾಲಾಗಿರುವ ಬೆನ್ನಲ್ಲೇ ಮಾಜಿ ಸಚಿವ ಹಾಲಿ ಶಾಸಕ ಎಚ್​​ಡಿ ರೇವಣ್ಣ ಕುಟುಂಬದ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ.

ಪ್ರಜ್ವಲ್ ರೇವಣ್ಣ ಅವರ ಅಣ್ಣ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್​ ರೇವಣ್ಣ ಅವರ ವಿರುದ್ಧವೂ ಸಹ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಅರಕಲಗೂಡು ಜೆಡಿಎಸ್​ ಕಾರ್ಯಕರ್ತನ ಮೇಲೆ ಸೂರಜ್​ ರೇವಣ್ಣ ಅವರು ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಲಕ್ಷಣ ಆರೋಪದಿಂದ ರೇವಣ್ಣ ಕುಟುಂಬ ಮತ್ತೆ ಮುಜುಗರಕ್ಕೀಡಾದಂತಾಗಿದೆ.

ಸೂರಜ್ ರೇವಣ್ಣ ಅವರು ಜೂನ್ 16ರ ರಾತ್ರಿ ತಮ್ಮ ಪಕ್ಷದ ಕಾರ್ಯಕರ್ತನಿಗೆ ಸಹಾಯ ಮಾಡುವುದಾಗಿ ಚನ್ನಪಟ್ಟಣ ತಾಲ್ಲೂಕಿನ ಗನ್ನಿಕಡದ ತೋಟದ ಮನೆಗೆ ಕರೆಯಿಸಿಕೊಂಡು ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕುಮಾರ ಸ್ವಾಮಿ ಪ್ರತಿಕ್ರಿಯೆ:

ದೆಹಲಿಯಿಂದ ತರಾತುರಿಯಲ್ಲಿ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA, Devanahalli) ಮಾಧ್ಯಮ ಪ್ರತಿನಿಧಿಳೊಂದಿಗೆ ಮಾತಾಡವಾಗ ಎಲ್ಲ ಪ್ರಶ್ನೆಗಳಿಗೆ ಶಾಂತಚಿತ್ತರಾಗಿ ಉತ್ತರ ನೀಡಿದರಾದರೂ ಪಕ್ಷದ ಕಾರ್ಯಕರ್ತನೊಬ್ಬನ ಮೇಲೆ ಅಸಹಜ ಲೈಂಗಿಕ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ವಿಧಾನ ಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣ (Dr Suraj Revanna) ಬಗ್ಗೆ ಪ್ರಶ್ನೆ ಕೇಳಿದಾಗ ಸಿಡುಕಿದರು. ಇಂಥ ಪ್ರಶ್ನೆಗಳನ್ನೆಲ್ಲ ಕೇಳಬಾರದು, ರಾಜ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳೇನಾದರೂ ಇದ್ದರೆ ಕೇಳಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಇಂಥ ಸಮಸ್ಯೆಗಳನ್ನು ನೋಡಿಕೊಳ್ಳಲು ಪೊಲೀಸ್ ವ್ಯವಸ್ಥೆ ಮತ್ತು ಕಾನೂನುಗಳಿವೆ ಎಂದು ಹೇಳಿದರು.

 

ಆರೋಪ ಮಾಡಿದವನ ಮೇಲೆ ಪ್ರಕರಣ:

ಸ್ವತಃ ಜೆಡಿಎಸ್‌ ಪಕ್ಷದ ಕಾರ್ಯಕರ್ತನೋರ್ವ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಪರವಾಗಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ಎಸ್‌ಪಿ ಮೊಹಮ್ಮದ್ ಸುಜೀತ್ ತಿಳಿಸಿದ್ದಾರೆ.

Latest Indian news

Popular Stories