ಅಣ್ಣನ ಸಾವಿನ‌ ಬಗ್ಗೆ ತಮ್ಮನ ಶಂಕೆ: 18 ದಿನಗಳ ಹಿಂದೆ ದಫನ ಮಾಡಿದ ಮೃತದೇಹ ಹೊರತೆಗೆದ ಪೊಲೀಸರು

ಬಂಟ್ವಾಳ: ಅಣ್ಣನ ನಿಧನದಲ್ಲಿ ಅನುಮಾನ ವ್ಯಕ್ತಪಡಿಸಿ ತಮ್ಮ ದೂರು ನೀಡಿದ ಹಿನ್ನೆಲೆಯಲ್ಲಿ ಹದಿನೆಂಟು ದಿನಗಳ ಹಿಂದೆ ದಫನ ಮಾಡಿದ ಮೃತದೇಹವನ್ನು ಮಂಜೇಶ್ವರ ಪೊಲೀಸರು ಪರೀಕ್ಷೆಗೆಂದು ಹೊರತೆಗೆದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕನ್ಯಾ ನದಲ್ಲಿ ನಡೆದಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮಜಿರ್ಪಳ್ಳದ ಅಶ್ರಫ್ (44) ತಮ್ಮ ಕನ್ಯಾನದಲ್ಲಿರುವ ಮನೆಯಲ್ಲಿ ಮೃತಪಟ್ಟಿದ್ದರು.
ಮೇ 5ರಂದು ರಾತ್ರಿ ಕನ್ಯಾನದ ತಮ್ಮ ಮನೆ ಸಮೀಪದ ಗೂಡಂಗಡಿ ಮುಚ್ಚಿ ಮನೆಯಲ್ಲಿ ಆಹಾರ ಸೇವಿಸಿ ನಿದ್ರಿಸಿದ್ದ ಅಶ್ರಫ್ ಮರುದಿನ ಬೆಳಗ್ಗೆ ಎದ್ದೇಳಲೇ ಇಲ್ಲ ಎನ್ನಲಾಗಿದೆ. ಮಲಗಿದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಶ್ರಫ್ ರ ಪತ್ನಿ ಇತರರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ.
ಆದರೆ ಪುಣೆಯಲ್ಲಿದ್ದ ಅಶ್ರಫ್ ಅವರ ತಮ್ಮ ಇತ್ತೀಚೆಗೆ ಊರಿಗೆ ಆಗಮಿಸಿದ್ದು, ಅಣ್ಣನ ಸಾವಿನಲ್ಲಿ ಶಂಕೆ ವ್ಯಕ್ತಪಡಿಸಿ ಮಂಜೇಶ್ವರ ಠಾಣೆಯಲ್ಲಿ ದೂರು ನೀಡಿದ್ದರು.

ಹಿನ್ನೆಲೆಯಲ್ಲಿ ದಫನ ಮಾಡಿರುವ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಮಂಜೇಶ್ವರ ಹಾಗೂ ವಿಟ್ಲ ಠಾಣಾ ಪೊಲೀಸರು ಮುಂದಾಗಿದ್ದಾರೆ.

ಬಂಟ್ವಾಳ ತಹಶೀಲ್ದಾರ್ ಉಪಸ್ಥಿತಿಯಲ್ಲಿ ಮಂಗಳೂರಿನ ಯೆನೆಪೊಯ ಆಸ್ಫತ್ರೆಯ ಫಾರೆನ್ಸಿಕ್ ವಿಭಾಗದ ಸಿಬ್ಬಂದಿ, ಕಾಸರಗೋಡು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನೆರವಿನಲ್ಲಿ ಅಶ್ರಫ್ ರ ಮೃತದೇಹವನ್ನು ಮೇಲೆತ್ತಿ ಪರೀಕ್ಷೆಗೆ ಒಳಪಡಿಸಲಾಗಿದೆ.

Latest Indian news

Popular Stories