ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯು ಬಿಡುಗಡೆ ಮಾಡಿರುವ ಜನಸಂಖ್ಯಾ ವರದಿ ಬಿಡುಗಡೆಗೊಂಡಿದೆ. ಈ ವರದಿಯು ದೇಶದಲ್ಲಿ ಹಿಂದೂಗಳ ಜನ ಸಂಖ್ಯೆ ಇಳಿಕೆಯಾಗಿದೆ ಹಾಗೂ ಮುಸ್ಲಿಮರ ಜನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿತ್ತು.
ಈ ವರದಿಯನ್ನು ಆಧರಿಸಿ ಕೆಲವೊಂದು ಮುಖ್ಯವಾಹಿನಿಯ ದೃಶ್ಯ ಮಾಧ್ಯಮಗಳು ಸರಣಿ ಚರ್ಚಾ ಕಾರ್ಯಕ್ರಮಗಳನ್ನು ನಡೆಸತೊಡಗಿವೆ. ಇಂಥದ್ದೇ ಒಂದು ಚರ್ಚೆಯನ್ನು ಕನ್ನಡದ ಸುದ್ದಿವಾಹಿನಿ ಸುವರ್ಣ ನ್ಯೂಸ್ ಕನ್ನಡ ಕೂಡ ನಿನ್ನೆ(ಮೇ 9, 2024 ಗುರುವಾರ) ಪ್ರಸಾರವಾಗಿದೆ.
ಮೇ 9ರ ರಾತ್ರಿ 8.30ಕ್ಕೆ ಪ್ರಸಾರಗೊಂಡಿರುವ ಈ ಕಾರ್ಯಕ್ರಮವನ್ನು ಸುವರ್ಣ ನ್ಯೂಸ್‌ನ ಅಜಿತ್ ಹನುಮಕ್ಕನವರ್ ನಿರೂಪಿಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಹಿಂದೂಗಳ ಜನಸಂಖ್ಯೆ ತಿಳಿಸಲು ಭಾರತದ ಧ್ವಜ, ಮುಸ್ಲಿಮರ ಜನ ಸಂಖ್ಯೆಯನ್ನು ತಿಳಿಸಲು ಪಾಕಿಸ್ತಾನದ ಧ್ವಜ ಬಳಸಿರುವುದು ಕಂಡುಬಂದಿದೆ.
ಇದರ ವಿಡಿಯೋ ಹಾಗೂ ಸ್ಕ್ರೀನ್‌ಶಾಟ್‌ನ ವಿಡಿಯೋವನ್ನು ಆಲ್ಟ್‌ನ್ಯೂಸ್‌ನ ಸಹ ಸಂಸ್ಥಾಪಕ ಹಾಗೂ ಪತ್ರಕರ್ತ ಮುಹಮ್ಮದ್ ಝುಬೇರ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಬಳಿಕ ಈ ಬೆಳವಣಿಗೆ ನಡೆದಿರುವುದು ಗೊತ್ತಾಗಿದೆ.
ಟ್ವೀಟ್‌ನಲ್ಲಿ ಮುಹಮ್ಮದ್ ಝುಬೇರ್ ಅವರು, “ಭಾರತೀಯ ಹಿಂದೂಗಳಿಗೆ ಭಾರತದ ಧ್ವಜ ಮತ್ತು ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನದ ಧ್ವಜ ಬಳಸಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡ ಮತ್ತು ಅದರ ಆ್ಯಂಕರ್ ಅಜಿತ್ ಹನುಮಕ್ಕನವರ್ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ವರದಿಯನ್ನು ಚರ್ಚಿಸುವಾಗ 20 ಕೋಟಿ ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನದ ಧ್ವಜ ಬಳಸಿ, ಚಿತ್ರಿಸಿದ್ದಾರೆ. ಕರ್ನಾಟಕದ ಸಂಘಟನೆಗಳು ಆ್ಯಂಕರ್ ಮತ್ತು ಚಾನೆಲ್ ವಿರುದ್ಧ ದೂರು ದಾಖಲಿಸುತ್ತವೆ ಎಂದುಕೊಂಡಿದ್ದೇನೆ” ಎಂದಿದ್ದಾರೆ.