ಪಕ್ಷದ ಹೆಸರು ಕೆಡಿಸಲು BJP ಜೊತೆ ಸ್ವಾತಿ ಮಲಿವಾಲ್‌ ಸಂಚು – ಆಪ್

ನವದೆಹಲಿ: ಸಂಸದೆ ಸ್ವಾತಿ ಮಲಿವಾಲ್ ಬಿಜೆಪಿ ಜೊತೆ ಸೇರಿ ಪಕ್ಷದ ಹೆಸರು ಕೆಡಿಸಲು ಸಂಚು ರೂಪಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಶುಕ್ರವಾರ ತನ್ನದೇ ಸಂಸದೆಯ ವಿರುದ್ಧ ಗಂಭೀರ ಆರೋಪ ಮಾಡಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಅವರ ನಿವಾಸದಲ್ಲಿ ಅವರ ಆಪ್ತರಿಂದಲೇ ಹಲ್ಲೆಗೊಳಗಾಗಿದ್ದಾಗಿ ಆರೋಪಿಸಿದ್ದ ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ವಿರುದ್ಧ ಎಎಪಿ ಶುಕ್ರವಾರ ಕಿಡಿಕಾರಿದೆ. ಲೋಕಸಭೆ ಚುನಾವಣೆ ವೇಳೆ ಪಕ್ಷದ ಹೆಸರು ಕೆಡಿಸಲು ಅವರು ಬಿಜೆಪಿ ಜೊತೆ ಕೈ ಜೋಡಿಸಿ ಈ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದೆ. ಶುಕ್ರವಾರ ಬಿಡುಗಡೆಯಾದ ಕೇಜ್ರಿವಾಲ್‌ ನಿವಾಸದ ವಿಡಿಯೋವನ್ನು ಕೂಡ ಎಎಪಿ ಇದೇ ವೇಳೆ ಬಿಡುಗಡೆ ಮಾಡಿದೆ.

ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಸಚಿವೆ ಆತಿಶಿ, ‘ಲೋಕಸಭೆ ಚುನಾವಣೆ ವೇಳೆ ಪಕ್ಷದ ಹೆಸರು ಕೆಡಿಸಲು ಸ್ವಾತಿ ಮಲಿವಾಲ್ ಅವರು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಲಿವಾಲ್‌ ಹಾಗೂ ಹಲ್ಲೆ ನಡೆಸಿದ್ದಾರೆ ಎನ್ನಲಾದ ಸಿಎಂ ಸಹಾಯಕನ ನಡುವಿನ ಕೇಜ್ರಿವಾಲ್‌ ಮನೆಯಲ್ಲಿನ 52 ಸೆಕೆಂಡ್‌ಗಳ ವಿಡಿಯೋವನ್ನು ಉಲ್ಲೇಖಿಸಿ ಆತಿಶಿ ಈ ಪತ್ರಿಕಾಗೋಷ್ಠಿ ನಡೆಸಿದ್ದು, ಈ ವೇಳೆ ಸಂಸದೆ ಸ್ವಾತಿ ಮಲಿವಾಲ್ ಬಿಜೆಪಿ ಜೊತೆ ಸೇರಿ ಪಕ್ಷದ ಹೆಸರು ಕೆಡಿಸಲು ಸಂಚು ರೂಪಿಸಿದ್ದಾರೆ.
ಸ್ವಾತಿ ಅವರು ಅಪಾಯಿಂಟ್‌ಮೆಂಟ್ ಇಲ್ಲದೆ ಸಿಎಂ ನಿವಾಸಕ್ಕೆ ಬಂದಿದ್ದರು. ಸಂಚಿನ ಭಾಗವಾಗಿ ಕೇಜ್ರಿವಾಲ್ ವಿರುದ್ಧ ಆರೋಪ ಮಾಡುವುದೇ ಆಕೆಯ ಉದ್ದೇಶವಾಗಿತ್ತು. ಈ ವಿಡಿಯೋದಲ್ಲಿ, ಮಾಲಿವಾಲ್‌ ಅವರಿಗೆ ಮನೆಯಿಂದ ಹೊರಹೋಗುವಂತೆ ಪದೇ ಪದೇ ಸಿಬ್ಬಂದಿ ಒತ್ತಾಯಿಸುತ್ತಿರುವುದು ದಾಖಲಾಗಿದೆ.

ಇದರಲ್ಲಿರುವ ಮಹಿಳೆ ಮಾಲಿವಾಲ್‌ ಎಂದು ನಂಬಲಾಗಿದೆ. ಆಕೆ ಅಲ್ಲಿಂದ ತೆರಳಲು ನಿರಾಕರಿಸುವುದಲ್ಲದೆ, ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆಯನ್ನೂ ಹಾಕುವುದು ಹಾಗೂ ಧೈರ್ಯವಿದ್ದರೆ ಎತ್ತಿ ಹೊರಹಾಕಿ ಎಂದು ಸವಾಲೆಸೆಯುವುದು ಕಾಣಿಸುತ್ತದೆ.

ಲೋಕಸಭೆ ಚುನಾವಣೆಗೂ ಮುನ್ನ ಕೇಜ್ರಿವಾಲ್ ಅವರನ್ನು ಗುರಿಯಾಗಿಸಲು ಬಿಜೆಪಿ ರೂಪಿಸಿದ ‘ಯೋಜನೆಗಳನ್ನು’ ಇದು ಬಹಿರಂಗಪಡಿಸಿದೆ ಎಂದು ಆತಿಶಿ ದೂರಿದ್ದಾರೆ.
”ಸ್ವಾತಿ ಮಲಿವಾಲ್‌ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಈಕೆ ಈ ಸಂಚಿನ ಪ್ರಮುಖ ಮುಖ ಹಾಗೂ ದಾಳ. ಹೆಚ್ಚುತ್ತಿರುವ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರ ಜನಪ್ರಿಯತೆಯಿಂದ ಕಂಗೆಟ್ಟು ಬಿಜೆಪಿ ಈ ಕೃತ್ಯಕ್ಕೆ ಕೈ ಹಾಕಿದೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಾಗಿನಿಂದ ಬಿಜೆಪಿ ಚಡಪಡಿಸುತ್ತಿತ್ತು. ಈ ಕಾರಣಕ್ಕೆ ಬಿಜೆಪಿ ಈ ಷಡ್ಯಂತ್ರ ರೂಪಿಸಿದೆ.

ಇದರ ಅಡಿಯಲ್ಲಿ ಸ್ವಾತಿ ಮಾಲಿವಾಲ್‌ ಅವರನ್ನು ಮೇ 13 ರಂದು ಬೆಳಿಗ್ಗೆ ಅರವಿಂದ್ ಕೇಜ್ರಿವಾಲ್ ಅವರ ಮನೆಗೆ ಕಳುಹಿಸಲಾಯಿತು. ಅವರು ಮುಖ್ಯಮಂತ್ರಿಯ ಮೇಲೆ ಆರೋಪ ಮಾಡುವ ಉದ್ದೇಶ ಹೊಂದಿದ್ದರು… ಆದರೆ ಆಗ ಕೇಜ್ರಿವಾಲ್‌ ಅವರು ಅಲ್ಲಿರಲಿಲ್ಲ. ಹೀಗಾಗಿ ಇದರಿಂದ ಬಚಾವಾದರು” ಎಂದು ಆತಿಶಿ ಹೇಳಿದ್ದಾರೆ.

“ಪೊಲೀಸರಿಗೆ ನೀಡಿದ ದೂರಿನಲ್ಲಿ ಆಕೆ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಹೇಳಿದ್ದಾಳೆ… ಆದರೆ ಆಕೆ ಆರಾಮವಾಗಿ ಕುಳಿತು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಿಭವ್ ಕುಮಾರ್‌ಗೆ ಬೆದರಿಕೆ ಹಾಕುತ್ತಿರುವುದನ್ನು ಸಹ ನೋಡಬಹುದು ಎಂದು ಹೇಳಿದ್ದಾರೆ.

Latest Indian news

Popular Stories