ಕಾರ್ಮಿಕ ಯೋಜನೆ ಲಾಭ ನೈಜ ಫಲಾನುಭವಿಗೆ ದೊರಕಿಸಲು ಕ್ರಮ ವಹಿಸಿ: ಸಚಿವ ಸಂತೋಷ ಲಾಡ್

A 1 4 Featured Story, State News, Vijayapura
ವಿಜಯಪುರ: ಕಾರ್ಮಿಕ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸಿರುವ ಹಲವು ಯೋಜನೆ-ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ನೈಜ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರಕಿಸಲು ಕ್ರಮ ವಹಿಸುವಂತೆ ಕಾರ್ಮಿಕ ಖಾತೆ ಸಚಿವರಾದ ಸಂತೋಷ್ ಲಾಡ್ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ನೋಂದಾಯಿಸಿರುವ ಕಾರ್ಮಿಕರಿಗೆ ಹಲವು ಯೋಜನೆಗಳಿದ್ದು, ಇದರ ಲಾಭ ನೈಜ ಫಲಾನುಭವಿಗೆ ತಲುಪುತ್ತಿರುವ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಕಾರ್ಮಿಕ ಇಲಾಖೆ ಯೋಜನೆಯ ದುರುಪಯೋಗವಾಗದಂತೆ ನೋಡಿಕೊಂಡು ನೈಜ ಕಾರ್ಮಿಕರಿಗೆ ಸವಲತ್ತುಗಳು ದೊರೆಯುವಂತೆ ಕ್ರಮ ವಹಿಸಬೇಕು. ಕಾರ್ಮಿಕರಿಗಿರುವ ವಿವಿಧ ಯೋಜನೆಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಿಳುವಳಿಕೆ ಮೂಡಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಬಾಲಕಾರ್ಮಿಕರ ರಕ್ಷಣೆ ಪ್ರಕರಣವನ್ನು ವಿಶೇಷವಾಗಿ ಪರಿಗಣನೆಗೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ರಾಜ್ಯದ ಬಾಲಕಾರ್ಮಿಕರ ಪ್ರಕರಣಗಳನ್ನು ಗಮನಿಸಿದಾಗ ಪ್ರತಿ ತಿಂಗಳು 2 ರಿಂದ 3 ಬಾಲಕಾರ್ಮಿಕರ ಪ್ರಕರಣಗಳು ಉತ್ತರ ಕರ್ನಾಟಕ ಭಾಗದಲ್ಲಿರುತ್ತವೆ. ಈ ಪ್ರಮಾಣ ಕಳೆದ 15 ವರ್ಷಗಳಿಗೆ ಹೋಲಿಕೆ ಮಾಡಿದಾಗ ಪ್ರಕರಣದ ಪ್ರಮಾಣ ಹೆಚ್ಚಾಗುತ್ತಿದ್ದು, ವಿಶೇಷ ಗಮನ ಹರಿಸಿ ಬಾಲಕಾರ್ಮಿಕರ ರಕ್ಷಣೆಗೆ ಮುಂದಾಗಬೇಕು ಎಂದು ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೇ ಕಾರ್ಯ ಕೈಗೊಳ್ಳಲಾಗಿದ್ದು, ಸರ್ವೇ ಅಂಕಿ ಅಂಶಗಳ ಪ್ರಕಾರ ಕೇವಲ 123 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಮಕ್ಕಳ ಪಾಲಕ-ಪೋಷಕರ ಮನವೊಲಿಸಿ ಶಾಲಾ ನೋಂದಣಿಗೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಕಾಲಕಾಲಕ್ಕೆ ವಿವಿಧೆಡೆ ತಪಾಸಣೆ ನಡೆಸಬೇಕು. ಯಾವುದೇ ಬಾಲಕಾರ್ಮಿಕರು ಇರದಂತೆ ಕಟ್ಟೆಚ್ಚರ ವಹಿಸಬೇಕು. ಜನರಲ್ಲಿ ಈ ಕುರಿತು ಸೂಕ್ತ ಜಾಗೃತಿ ಮೂಡಿಸಬೇಕು. ಮೇಲಿಂದ ಮೇಲೆ ವಿವಿಧೆಡೆ, ಡಾಭಾ, ಕಿರಾಣಿ, ಅಂಗಡಿ, ಹೊಟೇಲ್ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ, ಸೂಕ್ತ ತಿಳುವಳಿಕೆ ನೀಡಬೇಕು. ಆದಾಗ್ಯೂ, ಬಾಲಕಾರ್ಮಿಕರನ್ನು ನೇಮಿಸಿಕೊಂಡಲ್ಲಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ತಿಂಗಳು ಒಂದು ಬಾರಿ ಜಿಲ್ಲೆಯ ವಿವಿಧ ಜನಪ್ರತಿನಿಧಿ, ಹಿರಿಯ ಅಧಿಕಾರಿಗಳೊಂದಿಗೆ ಬಾಲಕಾರ್ಮಿಕ ರಕ್ಷಣೆ ಕುರಿತು ಸಭೆ ನಡೆಸಿ ಕೈಗೊಂಡ ಕ್ರಮಗಳ ಕುರಿತ ಹಾಗೂ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಪರಿಶೀಲನೆ ನಡೆಸಬೇಕು. ಹಿರಿಯ ಅಧಿಕಾರಿಗಳಿಂದ ಜನಪ್ರತಿನಿಧಿಗಳಿಂದ ಸೂಕ್ತ ಸಲಹೆ ಪಡೆದುಕೊಂಡು ಬಾಲಕಾರ್ಮಿಕರ ರಕ್ಷಣೆ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಈಗಾಗಲೇ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯೊಂದಿಗೆ ಪ್ರತಿ ತಿಂಗಳು ಪಾಲಕ-ಪೋಷಕರ ಸಭೆ ನಡೆಸಿ ಬಾಲಕಾರ್ಮಿಕ ಕುರಿತು ಸೂಕ್ತ ಜಾಗೃತಿ ಅರಿವು ಮೂಡಿಸಲಾಗುತ್ತಿದೆ. ಪಾಲಕರ ಮನವೊಲಿಸಿ ಮಕ್ಕಳ ಶಾಲಾ ದಾಖಲಾತಿಗೆ ಕ್ರಮ ವಹಿಸುತ್ತಿರುವ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಸಭೆಗಳಲ್ಲಿ ಕೇವಲ ಮಕ್ಕಳ ಪಾಲಕರು-ಪೋಷಕರು ಮಾತ್ರ ಭಾಗವಹಿಸಿರುತ್ತಾರೆ. ಇವರ ಮನವೊಲಿಕೆ ಮಾತ್ರವಲ್ಲದೇ, ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಗಳೊಂದಿಗೆ ಸಮನ್ವಯತೆಯನ್ನು ಸಾಧಿಸಿಕೊಂಡು ಅವರಲ್ಲಿಯೂ ಜಾಗೃತಿ ಮೂಡಿಸಬೇಕು. ಕೇವಲ ಸಭೆಗಳನ್ನು ನಡೆಸದೇ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಸೂಕ್ತ ಜಾಗೃತಿ ಮೂಡಿಸಿ ಬಾಲಕಾರ್ಮಿಕರು ಇರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕೇವಲ ಒಂದು ದಿನ ನೆಪ ಮಾತ್ರಕ್ಕೆ ಪರಿಶೀಲನೆ ನಡೆಸದೇ ನಿರಂತರವಾಗಿ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ, ಬಾಲಕಾರ್ಮಿಕರ ಪತ್ತೆ ಹಚ್ಚಬೇಕು. ಜನರಲ್ಲಿ ಸೂಕ್ತ ತಿಳುವಳಿಕೆ ಮೂಡಿಸಬೇಕು. ಎನ್ಜಿಓ, ರೋಟರಿ ಕ್ಲಬ್, ಲಾಯನ್ಸ್ ಕ್ಲಬ್ದ ಪ್ರತಿನಿಧಿಗಳೊಂದಿಗೆ ಪ್ರತಿ 3ತಿಂಗಳಿಗೊಮ್ಮೆ ಒಂದು ಸಲ ಢಾಭಾ ಕಿರಾಣಿ ಅಂಗಡಿ ಗ್ಯಾರೇಜ್ಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ಕೇವಲ ಒಂದು ಸಲ ಬೇಟಿ ನೀಡಿ ತಿಳುವಳಿಕೆ ಮಾಡಿದರೆ ಮನವೊಲಿಕೆಯಾಗಲ್ಲ, ಹಾಗಾಗಿ ನಿರಂತರವಾಗಿ ಎರಡೂ ಮೂರು ಸಲ ಭೇಟಿ ನೀಡಿ ಅವರ ಮನವೊಲಿಸಬೇಕು. ತಿಳುವಳಿಕೆ ಮೂಡಿಸಿದಾಗ ಜನರಲ್ಲಿಯೂ ಜಾಗೃತಿ ಮೂಡಲಿದೆ. ತೀವ್ರ ಜಾಗೃತಿ ಮೂಡಿಸಲು ಮುಂಚಿತವಾಗಿಯೇ ಕ್ರೀಯಾಯೋಜನೆಯೊಂದನ್ನು ರೂಪಿಸಿಕೊಳ್ಳಬೇಕು. ಕ್ರೀಯಾಯೋಜನೆ ರೂಪರೇಷೆಯಂತೆ ಪ್ರತಿ ದಿನ ವಿವಿಧ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಬಾಲಕಾರ್ಮಿಕ ಸ್ಥಳಗಳಿಗೆ ಖುದ್ದಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಬೇಕು ಇದರಿಂದ ಜನರಲ್ಲಿ ತೀವ್ರ ಅರಿವೂ ಮೂಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಅಂಗನವಾಡಿ, ಬಿಸಿಯೂಟ ಕಾರ್ಯಕ್ರಮಗಳಿಂದ ಗುಳೆ ಹೋಗುವ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಇಂತಹ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸಿ ಗುಳೆಹೋಗುವುದನ್ನು ತಪ್ಪಿಸಬಹುದಾಗಿದ್ದು, ಬಾಲಕಾರ್ಮಿಕ ಕುರಿತು ಪರಿಣಾಮಕಾರಿ ಅನುಷ್ಠಾನಗೊಳಿಸಿ ಜಾಗೃತಿ ಮುಡಿಸಬೇಕು. ಪ್ರತಿ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳ ಕುರಿತು ಮಾಹಿತಿಯನ್ನು ಪ್ರತಿ ತಿಂಗಳು ಜಿಲ್ಲೆಯಿಂದ ಸಲ್ಲಿಸಬೇಕು. ಇತ್ತೀಚೆಗೆ ಹುಟ್ಟುಹಬ್ಬದ ಕಾರ್ಯಕ್ರಮಗಳಲ್ಲಿ ಸ್ಪಾರ್ಕಲ್ ಬರ್ತಡೇ ಕ್ಯಾಂಡಲ್ಗಳ ಬಳಕೆ ಮಾಡುತ್ತಿರುವುದರಿಂದ ಕೆಲವು ಕಡೆ ಅಗ್ನಿ ಅವಘಡಗಳು ಸಂಭವಿಸಿದೆ.ಈ ಕುರಿತು ಗಮನ ಹರಿಸಿ ಇವುಗಳ ಬಳಕೆಗೆ ಅನುಮತಿ ಪಡೆಯುವ ಕುರಿತು ಕ್ರಮ ವಹಿಸುವಂತೆ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜವಳಿ, ಕಬ್ಬು ಅಭಿವೃದ್ದಿ, ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲಕಾರ್ಮಿಕರನ್ನು ಗುರುತಿಸಿ, ರಕ್ಷಿಸಲು ಟಾಸ್ಕ್ ಪೋರ್ಸ್ ಸಮಿತಿ ರಚಿಸುವಂತೆ ಸಲಹೆ ನೀಡಿದ ಅವರು, ಜಿಲ್ಲೆಯಲ್ಲಿರುವ ನೇಕಾರರನ್ನು ಕಾರ್ಮಿಕರೆಂದು ಗುರುತಿಸುವ ಸಾಧ್ಯಾಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಬೇಕು. ಜಿಲ್ಲೆಯ ಕಾರ್ಮಿಕರಿಗಾಗಿ ಕಾರ್ಯಕ್ರಮಗಳ ಆಯೋಜನೆಗೆ ಶ್ರಮಿಕ ಭವನ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಗುರುತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕದೊಂಡ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಕಾರ್ಮಿಕ ಆಯುಕ್ತರಾದ ಗೋಪಾಲ ಕೃಷ್ಣ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಕಾರ್ಯದರ್ಶಿ ಶ್ರೀಮತಿ ಭಾರತಿ, ಜಿಲ್ಲಾಧಿಕಾರಿ ಟಿ.ಭೂಬಾಲನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಋಷಿಕೇಶ ಸೋನಾವನೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಕಾರ್ಮಿಕ ಅಧಿಕಾರಿ ಎಸ್.ಜಿ.ಖೈನೂರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories