ಸಾಂವಿಧಾನಿಕ ಮಾನ್ಯತೆ ಇಲ್ಲದ DCM ಹುದ್ದೆ ಬಗ್ಗೆ ಮಾತನಾಡುವುದು ನಾನ್ ಸೆನ್ಸ್- ರಾಯರೆಡ್ಡಿ

ಕಲಬುರಗಿ: ಸಾಂವಿಧಾನಿಕ ಮಾನ್ಯತೆ ಇಲ್ಲದ ಉಪ ಮುಖ್ಯಮಂತ್ರಿ(ಡಿಸಿಎಂ) ಹುದ್ದೆಯ ಬಗ್ಗೆ ಮಾತನಾಡುವುದು ನಾನ್ ಸೆನ್ಸ್ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಕೇವಲ ಗೌರವದ ಹುದ್ದೆ. ಸಂವಿಧಾನದಲ್ಲಿ ಅದಕ್ಕೆ ಮಾನ್ಯತೆ ಇಲ್ಲ. ಹೆಚ್ಚುವರಿ ಡಿಸಿಎಂ ಸೃಷ್ಟಿ ಕುರಿತು ಮಾತನಾಡುವುದು ಅಸಂಬದ್ಧ. ಜಾತಿ ಆಧಾರದ ಮೇಲೆ ಡಿಸಿಎಂ ಬೇಡಿಕೆ ಸೂಕ್ತವಲ್ಲಾ. ಬದಲಿಗೆ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಎಂದರು.

ಸಿಎಂ ಬದಲಾವಣೆ ಬಗ್ಗೆ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ನೀಡಿದ್ದು ಸರಿಯಲ್ಲ. ಅದರ ಬಗ್ಗೆ ಮಾತನಾಡಲು ಅವರೇನು ಶಾಸಕಾಂಗ ಪಕ್ಷದ ಸದಸ್ಯರಾ ಅಥವಾ ಪಕ್ಷದ ವರಿಷ್ಠರಾ? ಎಂದು ಪ್ರಶ್ನಿಸಿದ ಅವರು, ಧಾರ್ಮಿಕ ಮುಖಂಡರಾದವರು ರಾಜಕೀಯದಲ್ಲಿ ಮೂಗು ತೂರಿಸಬಾರದು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯುತ್ತಮ ಆಡಳಿತಗಾರ. ಇನ್ನೂ ನಾಲ್ಕು ವರ್ಷ ಅವರೇ ಸಿಎಂ ಆಗಲು ಅವಕಾಶ ಮಾಡಿಕೊಡಬೇಕು. ಅವರು ಮುಖ್ಯಮಂತ್ರಿ ಆಗಿದ್ದರೆ ರಾಜ್ಯಕ್ಕೆ ಅನುಕೂಲವಾಗುತ್ತದೆ. ಏನೆಲ್ಲಾ ಮಾತನಾಡಿದ್ದರೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ. ಒಂದು ವೇಳೆ ನಾಯಕತ್ವ ಬದಲಾವಣೆ ಮಾಡಿದರೆ ಅದು ಪಕ್ಷದ ಶಾಸಕರು ಹಾಗೂ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.

Latest Indian news

Popular Stories