ಬಾಂಗ್ಲಾದೇಶದ ಇತಿಹಾಸದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಹೊಸತಲ್ಲ. ಆದರೆ ಜನರು ದಂಗೆ ಎದ್ದು ಸರಕಾರವನ್ನು ಪತನಗೊಳಿಸಿದ್ದು ಇದೇ ಮೊದಲು. 15 ವರ್ಷಗಳ ಕಾಲ ಬಾಂಗ್ಲಾದೇಶವನ್ನು ಕಪಿಮುಷ್ಠಿಯಲ್ಲಿ ಆಡಳಿತ ನಡೆಸಿದ ಶೇಖ್ ಹಸೀನಾ ಬಳಸಿದ ಒಂದು ಪದ ಬಾಂಗ್ಲಾದೇಶದ ಜನರಲ್ಲಿ ವ್ಯಾಪಾಕ ಆಕ್ರೋಶಕ್ಕೆ ಕಾರಣವಾಗಿಸಿತ್ತು. ಆ ಪದವೇ “ರಝಾಕರ್”!
ಬಾಂಗ್ಲಾದೇಶದಲ್ಲಿ, “ರಜಾಕರ್” ಎಂಬುದು ಅತ್ಯಂತ ಆಕ್ರೋಶಿತ ಪದ. ಸ್ವಯಂಸೇವಕರು ಎಂಬುವುದು ಈ ಪದದ ಅರ್ಥ ಆದರೆ ಇದು 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧವನ್ನು ಹತ್ತಿಕ್ಕಲು ಪಾಕಿಸ್ತಾನಿ ಮಿಲಿಟರಿಯ ಕಾರ್ಯಾಚರಣೆಯನ್ನು ಬೆಂಬಲಿಸಿದವರನ್ನು ಮತ್ತು ಘೋರ ಅಪರಾಧಗಳ ಆರೋಪವನ್ನು ಹೊಂದಿರುವವರನ್ನು ಬಾಂಗ್ಲಾದೇಶದಲ್ಲಿ “ರಝಾಕರ್” ಎಂದು ನಿಂದಿಸಲಾಗುತ್ತದೆ.
ತನ್ನ ಸರಕಾರದ ವಿರುದ್ದ ಭಿನ್ನಾಭಿಪ್ರಾಯ ಹೊಂದಿರುವವರ ವಿರುದ್ಧ ಶೇಖ್ ಹಸೀನಾ ಈ ಪದಗಳು ವಿಫುಲವಾಗಿ ಬಳಸುತ್ತಿದ್ದರು. ಅಷ್ಟೇ ಅಲ್ಲದೇ ಅವರ ವಿರುದ್ಧ ಇದ್ದ ದನಿಗಳನ್ನು ಹತ್ತಿಕ್ಕಿ, ಹಲವು ಮಂದಿಯ ಹತ್ಯೆ ಕೂಡ ನಡೆಸಿದ್ದರು. ಮಾಧ್ಯಮಗಳನ್ನು ಕೂಡ ತನ್ನ ಕಪಿ ಮುಷ್ಠಿಯಲ್ಲಿಟ್ಟುಕೊಂಡು ತನ್ನ ಪರವಾಗಿ ನಿರೂಪಣೆಯನ್ನು ಕೂಡ ಸೃಷ್ಟಿಸಿದ್ದರು.
ಮಾಜಿ ಪ್ರಧಾನಿ ಮತ್ತು ಪ್ರಮುಖ ವಿರೋಧ ಪಕ್ಷದ ನಾಯಕಿ ಬೇಗಂ ಖಲೀದಾ ಜಿಯಾ ಅವರನ್ನು ಭ್ರಷ್ಟಾಚಾರದ ಆರೋಪದಲ್ಲಿ 2018 ರಲ್ಲಿ ಜೈಲಿಗೆ ಹಾಕಲಾಯಿತು. ಜಮಾತ್-ಎ-ಇಸ್ಲಾಮಿಯ ಪ್ರಮುಖ ವ್ಯಕ್ತಿಯನ್ನು 2016 ರಲ್ಲಿ ಗಲ್ಲಿಗೇರಿಸಲಾಯಿತು ಇದೆಲ್ಲವೂ ಕೂಡ ಬಾಂಗ್ಲಾದೇಶದ ಜನರನ್ನು ಅಂತರಿಕವಾಗಿ ಕುದಿಯುವಂತೆ ಮಾಡುತ್ತಿತ್ತು.
ಇದೇ ಸಂದರ್ಭದಲ್ಲಿ ಉದ್ಯೋಗ ಮೀಸಲಾತಿ ವಿರೋಧಿಸಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು “ರಜಾಕರ್” ಎಂದು ಕರೆದು ಶೇಖ್ ಹಸೀನಾ ನಿರ್ಣಾಯಕ ತಪ್ಪು ಹೆಜ್ಜೆಯನ್ನು ಇಟ್ಟರು. ಪ್ರತಿಭಟನೆಯ ಕುರಿತು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದಾಗ ಹಸೀನಾ ಪ್ರತಿಕ್ರಿಯಿಸಿ, “ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಕ್ಕಳು [ಕೋಟಾ] ಪ್ರಯೋಜನಗಳನ್ನು ಪಡೆಯದೆ ಯಾರು ಪಡೆಯಬೇಕು? ರಜಾಕರ ಮೊಮ್ಮಕ್ಕಳು ಪಡೆಯಬೇಕೇ? ಎಂದು ಹೇಳಿದ್ದರು. ಈ ಒಂದು ಹೇಳಿಕೆ ಇಡೀ ವಿದ್ಯಾರ್ಥಿ ಸಮುದಾಯವನ್ನು ಪ್ರಚೋದಿಸಿತು.
ವಿದ್ಯಾರ್ಥಿಗಳು ಕೆಲವೇ ಗಂಟೆಗಳಲ್ಲಿ ಪ್ರತಿಭಟನೆಯನ್ನು ಪ್ರಾರಂಭಿಸಿದರು. ಢಾಕಾ ವಿಶ್ವವಿದ್ಯಾಲಯದ ಕ್ಯಾಂಪಸ್ ಮೂಲಕ ಮೆರವಣಿಗೆ ಆರಂಭಿಸಿ ಪ್ರಚೋದನಕಾರಿ ಘೋಷಣೆಯಾದ “ನೀವು ಯಾರು? “ನಾನು ರಜಾಕಾರ” ಎಂದು ಕೂಗುತ್ತ ಸಾಗಿದರು. ಈ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 200 ಕ್ಕೂ ಅಧಿಕ ಜನರು ಮೃತಪಟ್ಟರು. ಇದರಿಂದ ಆಕ್ರೋಶಿತರಾದ ಪ್ರತಿಭಟನಾಕಾರರು ಕೊನೆಗೆ ” ಶೇಖ್ ಹಸೀನಾ” ರಾಜೀನಾಮೆ ನೀಡಬೇಕೆಂದು ಒಕ್ಕೊರಲಿನ ಬೇಡಿಕೆ ಮುಂದಿಟ್ಟು ಪ್ರತಿಭಟನೆ ತೀವ್ರಗೊಳಿಸಿದ ಪರಿಣಾಮ ಕೊನೆಗೆ ಪ್ರತಿಭಟನಾಕಾರರ ಆಕ್ರೋಶಕ್ಕೆ ಮಣಿದು ರಾಜೀನಾಮೆ ನೀಡಿ ದೇಶ ತೊರೆಯಬೇಕಾಯಿತು!.