ಶಿವಮೊಗ್ಗ : ಉಡುಪಿ ಜಿಲ್ಲೆ ಕುಂದಾಫುರ ತಾಲ್ಲೂಕಿನ ಶಿಕ್ಷಕರೊಬ್ಬರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆ ಹಿಡಿದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಇತ್ತೀಚೆಗೆ ಮಣಿಪಾಲದಲ್ಲಿ ಪ್ರತಿಭಟಿಸಿದ ಶಾಸಕ ಯಶಪಾಲ್ ಸುವರ್ಣ ಸೇರಿದಂತೆ 11 ಮುಖಂಡರ ಮೇಲೆ ಕೇಸ್ ದಾಖಲಿಸಿರುವುದನ್ನು ವಿಧಾನ ಪರಿಷತ್ತಿನ ಶಾಸಕ ಡಾ.ಧನಂಜಯ ಸರ್ಜಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಹೋರಾಟ ಮಾಡುವ ಹಕ್ಕಿದೆ. ಪ್ರತಿಭಟನೆಯನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ. ಸರ್ಕಾರ ಬಂದು ಕೇವಲ 16 ತಿಂಗಳುಗಳ ಒಳಗೆ ಸಾಲು ಸಾಲು ಭ್ರಷ್ಟಾಚಾರ ಮಾಡಿ ನಾಡಿನ ಜನತೆಯ ಆಕ್ರೋಶಕ್ಕೆ ಕಾರಣರಾಗಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರ, ಇದೀಗ ಒಬ್ಬ ಪ್ರಾಮಾಣಿಕ ಶಿಕ್ಷಕನ ಮೇಲೆ ಗದಾಪ್ರಹಾರ ಮಾಡುತ್ತಿದೆ. ಅದನ್ನು ಪ್ರಶ್ನಿಸಿಲು ಹೋದರೆ ಎಫ್.ಐ.ಆರ್ ದಾಖಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ.
ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆ ಹಿಡಿದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಇತ್ತೀಚೆಗೆ ಮಣಿಪಾಲದಲ್ಲಿ ಪ್ರತಿಭಟಿಸಿದ ಶಾಸಕ ಯಶಪಾಲ್ ಸುವರ್ಣ ಸೇರಿದಂತೆ 11 ಮುಖಂಡರ ಮೇಲೆ ಕೇಸ್ ದಾಖಲಿಸಿರುವುದು ಖಂಡನೀಯ.
ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಕ್ಕೆ ಅವಕಾಶವಿಲ್ಲ. ಶಿಕ್ಷಕರ ಸೇವೆ, ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರವೇ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಬಳಿಕ ಮತೀಯವಾದಿಗಳ ಒತ್ತಡಕ್ಕೆ ಮಣಿದು ಪ್ರಶಸ್ತಿಯನ್ನು ತಡೆ ಹಿಡಿಯಲಾಗಿದೆ, ಪ್ರಜಾಪ್ರಭುತ್ವದಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟಿಸುವುದು, ಧ್ವನಿ ಎತ್ತುವುದು ಮೂಲ ಹಕ್ಕು. ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ. ನಾನಾ ಹಗರಣಗಳಿಂದಾಗಿ ಸರ್ಕಾರದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಅಲ್ಲದೇ ಅತಿವೃಷ್ಟಿಯಿಂದ ಸಂತ್ರಸ್ತರ ನೆರವಿಗೂ ಬಂದಿಲ್ಲ, ಇದು ನಿಜಕ್ಕೂಖಂಡನೀಯ. 11 ಮಂದಿ ಪ್ರತಿಭಟನಾಕಾರರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ತಕ್ಷಣವೇ ವಾಪಾಸು ಪಡೆಯಬೇಕು. ವಾಪಾಸು ಪಡೆಯದಿದ್ದಲ್ಲಿ ಮುಂದಿನ ಹೋರಾಟಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಡಾ.ಧನಂಜಯ ಸರ್ಜಿ ಅವರು ಎಚ್ಚರಿಸಿದ್ದಾರೆ.